ADVERTISEMENT

ಸೊಪ್ಪೆಯ ಬಣವೆ ರೈತನಿಗೆ ಒಡವೆ

ತಾವರಗೇರಾ: ಮಳೆಗಾಲಕ್ಕೆ ಜಾನುವಾರುಗಳಿಗೆ ಅಗತ್ಯ ಮೇವು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 13:48 IST
Last Updated 1 ಜೂನ್ 2018, 13:48 IST
ತಾವರಗೇರಾ ಸಮೀಪದ ನವಲಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬಣವೆ ನಿರ್ಮಿಸುತ್ತಿರುವುದು
ತಾವರಗೇರಾ ಸಮೀಪದ ನವಲಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬಣವೆ ನಿರ್ಮಿಸುತ್ತಿರುವುದು   

ತಾವರಗೇರಾ: ಕೃಷಿ ಚಟುವಟಿಕೆ ಜತೆಗೆ ಜಾನುವಾರುಗಳ ರಕ್ಷಣೆಯೂ ರೈತರಿಗೆ ಮುಖ್ಯ. ಹೀಗಾಗಿ ರೈತರು ಜಾನುವಾರುಗಳಿಗೆ ಅಗತ್ಯವಾದ ಮೇವಿನ ಸಂಗ್ರಹ ಮಾಡುವುದು ಎಲ್ಲೆಡೆ ಕಂಡು ಬರುತ್ತಿದೆ.

ಕೃಷಿ ಚಟುವಟಿಕೆಗೆ ಎತ್ತುಗಳನ್ನು ಸಾಕಿದರೆ ಹೈನುಗಾರಿಕೆಗೆ ಎಮ್ಮೆ,ಆಕಳು ಸಾಕಾಣಿಕೆ ಮಾಡುತ್ತಾರೆ. ಮಳೆಗಾಲದಲ್ಲಿ ಅರಣ್ಯ ಭೂಮಿ ಮತ್ತು ರೈತರ ಸ್ವಂತ ಜಮೀನಿನಲ್ಲಿ ಹಸಿ ಮೇವು ಸಿಗುತ್ತದೆ. ಆದರೆ, ಬೇಸಿಗೆಯಲ್ಲಿ ಮೇವಿನ ಕೊರತೆ ಎದುರಾಗುತ್ತದೆ. ಹೀಗಾಗಿ ರೈತರು ತಾವು ಬೆಳೆದ ಬೆಳೆಯಿಂದ ಸಿಗುವ ಒಣ ಸೊಪ್ಪೆ, ದ್ವಿದಳ ಬೆಳೆಯಿಂದ ಸಿಗುವ ಹೊಟ್ಟು ಸಂಗ್ರಹಿಸಿ ಮೇವಿಗೆ ಬಳಸುತ್ತಾರೆ.

ರೈತರು ಪ್ರತಿ ವರ್ಷ ಹಿಂಗಾರು ಬೆಳೆ ಕಟಾವು ಮಾಡಿದ ನಂತರ ವಿವಿಧ ಬೆಳೆಗಳ ರಾಶಿ ಮಾಡುತ್ತಾರೆ. ಆ ಸಮಯದಲ್ಲಿ ಸಿಗುವ ಜೋಳದ ಒಣ ಸೊಪ್ಪೆ, ಸಜ್ಜಿ, ನವಣಿ ಸೊಪ್ಪೆ, ತೊಗರಿ, ಅವರೆ, ಕಡಲೆ, ಶೇಂಗಾ ಬೆಳೆಯಿಂದ ಬರುವ ಹೊಟ್ಟು ಸಂಗ್ರಹ ಮಾಡಲಾಗುತ್ತದೆ. ಇದು ಮೇವಿನ ಕೊರತೆ ನೀಗಿಸುವ ಜತೆಗೆ ಜಾನುವಾರುಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ.

ADVERTISEMENT

ಮಳೆಗಾಲ, ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ಈ ಒಣ ಮೇವು ಜೀವಾಳವಾಗಿದೆ. ಕೃಷಿ ಚಟುವಟಿಕೆ ಕಾರ್ಯ ಹೆಚ್ಚು ನಡೆದಾಗ ಎತ್ತುಗಳನ್ನು ಮೇಯಿಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಹೊಟ್ಟು ಹಾಕಲಾಗುತ್ತದೆ.

ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಜಾನುವಾರುಗಳಿಗೆ ಹಸಿ ಮೇವು ತರಲು ಆಗುವುದಿಲ್ಲ. ಆಗ ಸಂಗ್ರಹ ಮಾಡಿದ ಒಣ ಮೇವು ಬಳಸಿತ್ತೇವೆ ಎನ್ನುತ್ತಾರೆ ನವಲಹಳ್ಳಿಯ ರೈತ ಬಸವರಾಜ ಕರಿಯಪ್ಪ ಅಂಗಡಿ.

ಈ ಭಾಗದಲ್ಲಿ ಪ್ರತಿ ವರ್ಷ ಬೇಸಿಗೆ ಬಂದರೆ ಗ್ರಾಮದ ಸುತ್ತ ಅಥವಾ ಸಮೀಪದ ಜಮೀನುಗಳಲ್ಲಿ ರೈತರು ನಿರ್ಮಿಸಿರುವ ಒಣ ಮೇವಿನ ಬಣವೆಗಳು ಕಣ್ಣಿಗೆ ಬೀಳುತ್ತವೆ. ಈ ಬಣವೆ ನಿರ್ಮಿಸುವ ಕಲೆ ಕೆಲವು ರೈತರಿಗೆ ಮಾತ್ರ ಸಿದ್ಧಿಸಿರುತ್ತದೆ. ಗ್ರಾಮದಲ್ಲಿ ಎರಡರಿಂದ ಮೂರು ಜನಕ್ಕೆ ಮಾತ್ರ ಬಣವೆ ಹಾಕುವ ಕಲೆ ಗೊತ್ತಿದೆ. ಅವರಿಗೆ ದಿನಕ್ಕೆ ₹200 ಕೂಲಿ ರೈತರು ಕೊಡುತ್ತಾರೆ.

ಒಂದು ಬಣವೇ ನಿರ್ಮಿಸಲು 4- 5 ದಿನಗಳು ಬೇಕಾಗುತ್ತದೆ. ಅದು ರೈತರ ಜಮೀನಿಗಳು ಮತ್ತು ರೈತರು ಸಂಗ್ರಹಿಸಿರುವ ಸೊಪ್ಪಿನ ಪ್ರಮಾಣವನ್ನು ಆಧರಿಸಿರುತ್ತದೆ. ಮಳೆಗಾಲದಲ್ಲಿ ಮಳೆ ಬಂದರೂ ಬಣವೆ ಒಳಗೆ ಮೇವಿಗೆ ಮತ್ತು ಸೊಪ್ಪಿಗೆ ನೀರು ಹೋಗುವುದಿಲ್ಲ. ಬಣವೆ ಮೇಲೆ ಭತ್ತದ ಹುಲ್ಲಿನಿಂದ ಹೊದಿಕೆ ಹಾಕಿರುತ್ತಾರೆ. ರೈತರ ಜೀವನಾಡಿ ಜಾನುವಾರುಗಳಿಗೆ ಮೇವಿನ ಸಂಗ್ರಹಕ್ಕೆ ರೈತರು ಹೆಚ್ಚಿನ ಕಾಳಜಿ ವಹಿಸುತ್ತಾರೆ.
**
ಹಿಂಗಾರು ಬೆಳೆ ಕಟಾವು ನಂತರ ಜೋಳ, ಸಜ್ಜಿಯ ಒಣ ಸೊಪ್ಪೆಯನ್ನು ಸಂಗ್ರಹಿಸುತ್ತೇವೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಇರುವುದಿಲ್ಲ
- ಶ್ಯಾಮಣ್ಣ ಸಿಂಗ್ರಿ, ನಂದಾಪುರ ಗ್ರಾಮದ ರೈತ        

ಶರಣಬಸವ ನವಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.