ADVERTISEMENT

ಸ್ಥಳೀಯ ಸಂಸ್ಥೆ ಸೂಪರ್‌ಸೀಡ್-ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2011, 8:45 IST
Last Updated 23 ಆಗಸ್ಟ್ 2011, 8:45 IST
ಸ್ಥಳೀಯ ಸಂಸ್ಥೆ ಸೂಪರ್‌ಸೀಡ್-ಎಚ್ಚರಿಕೆ
ಸ್ಥಳೀಯ ಸಂಸ್ಥೆ ಸೂಪರ್‌ಸೀಡ್-ಎಚ್ಚರಿಕೆ   

ಕೊಪ್ಪಳ: ದಲಿತ ಸಮುದಾಯದ ಏಳಿಗೆಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡದಿದ್ದರೆ ಅಥವಾ ನಿರ್ಲಕ್ಷ್ಯ ತೋರಿದರೆ ಅಂತಹ ಸ್ಥಳೀಯ ಸಂಸ್ಥೆಯನ್ನು ಸೂಪರ್‌ಸೀಡ್ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ಅವರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ದಿಗಾಗಿ ವಿವಿಧ ಇಲಾಖೆಗಳು ಕೈಗೊಂಡಿರುವ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿನ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ದಲಿತರ ಏಳಿಗೆಗಾಗಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಯತ್ನಿಸಬೇಕು. ಆದರೆ, ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿನ ಕಾರ್ಯ ತೃಪ್ತಿಕರವಾಗಿಲ್ಲ. ಇನ್ನು ಮುಂದೆ ಇಂತಹ ಲೋಪ ಕಂಡು ಬರುವ ಸ್ಥಳೀಯ ಸಂಸ್ಥೆಗಳನ್ನು ಸೂಪರ್‌ಸೀಡ್ ಮಾಡುವಂತೆ ಶಿಫಾರಸು ಕಳಿಸಿದರೆ ತಕ್ಷಣ ಕ್ರಮ ಕೈಗೊಳ್ಳುವ ಏರ್ಪಾಡು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಸೂಚನೆ ನೀಡಿದರು.

ಪರಿಶಿಷ್ಟ ಫಲಾನುಭವಿಗಳಿಗೆ ನಿವೇಶನ ನೀಡಿಕೆ, ಅಡುಗೆ ಅನಿಲ ಸಿಲಿಂಡರ್ ವಿತರಣೆ, ಕುಡಿಯುವ ನೀರು ಸೌಲಭ್ಯ, ಶೌಚಾಲಯ ನಿರ್ಮಾಣ ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಸಿದ್ಧತೆ ಮಾಡದಿರುವುದಕ್ಕೆ ಸಚಿವ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಗಣಕೀಕರಣ: ಪರಿಶಿಷ್ಟರ ಕಲ್ಯಾಣಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಆದರೆ, ಹಣ ಬಳಕೆಯಾದ ಬಗ್ಗೆ ಯಾಗಲಿ, ಪ್ರಗತಿಯ ವರದಿಯಾಗಲಿ ಸಮರ್ಪಕವಾಗಿ ಇಲಾಖೆಗೆ ಸಿಗುತ್ತಿಲ್ಲ. ಇದನ್ನು ನಿವಾರಿಸಲು  ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 ಗಡುವು: ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ಕೊರೆಸಲಾಗಿರುವ ಕೊಳವೆ ಬಾವಿಗಳ ಪೈಕಿ  681 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಇನ್ನೆರಡು ತಿಂಗಳ ಒಳಗಾಗಿ ಇವುಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜೆಸ್ಕಾಂ ಕಾರ್ಯ ಪಾಲಕ ಎಂಜಿನಿಯರ್ ಮಹದೇವಸ್ವಾಮಿಗೆ ಸೂಚನೆ ನೀಡಿದರು.

ಚಿತ್ರೀಕರಣ: ವಸತಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಆಹಾರದ ಗುಣಮಟ್ಟದ ಮೇಲೆ ನಿಗಾ ವಹಿಸಲು ಕ್ಯಾಮರಾ ಅಳವಡಿಕೆ ಮತ್ತು ವಿಡಿಯೋ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದ್ದು, ಈ ಕುರಿತಂತೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದರು.

ಸಂಸದ ಶಿವರಾಮಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ಯಾಪುರ, ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆ ಡಾ.ಸೀತಾ ಹಲಗೇರಿ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಡಂಬಳ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್.ಕಾಕನೂರ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.