ಗಂಗಾವತಿ: ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗಾಗಿ ತಾಲ್ಲೂಕಿನ ಹೇಮಗುಡ್ಡದ (ಎಮ್ಮೆಗುಡ್ಡ) ಬಳಿ ಧ್ವಂಸಗೊಳಿದ್ದಾರೆ ಎನ್ನಲಾದ ಸ್ಮಾರಕ ಸ್ಥಳಕ್ಕೆ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. 
 
 ಮುಕ್ಕುಂಪಿ ಕೆರೆಯ ಮೇಲಿನ ವಿಶಾಲ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಮಣ್ಣಿನ ಬೆಟ್ಟವನ್ನು ಅಗೆಯಲಾಗಿದೆ. ರೈಲ್ವೆ ಹಳಿ ನಿರ್ಮಾಣದ ನೆಲಹಾಸಿಗೆ ಬೆಟ್ಟದ ಮಣ್ಣು ಬಳಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೆಟ್ಟದ ಮೇಲಿದ್ದ ಸ್ಮಾರಕಕ್ಕೆ ಧಕ್ಕೆಯಾಗಿದೆ.    ಆದರೆ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ಜಾಗೃತಿ ವಹಿಸಿರುವ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳು ಬೆಟ್ಟದ ಮೇಲ್ಬಾಗದಲ್ಲಿದ್ದ ಎರಡು ಬೃಹತ್ ಕಲ್ಲಿನ ಸ್ಮಾರಕಗಳನ್ನು ಧಾರ್ಮಿಕ ವಿಧಿಗನುಸಾರವಾಗಿ ಸ್ಥಳಾಂತರಕ್ಕೆ ಯತ್ನಿಸಿದ್ದಾರೆ.  
 
 ಆದರೆ ಸ್ಥಳೀಯರ ತೀವ್ರ ಪ್ರತಿರೋಧದಿಂದಾಗಿ ಸ್ಮಾರಕಗಳ ಸ್ಥಳಾಂತರ ಕಾರ್ಯವನ್ನು ತಕ್ಷಣಕ್ಕೆ ನಿಲ್ಲಿಸಲಾಗಿದೆ.
 
 ಸಂಶೋಧಕ ಭೇಟಿ: ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಬುಧವಾರ ಭೇಟಿ ನೀಡಿ, ಹಾನಿಗೀಡಾದ ಶಿಲಾ ಸ್ಮಾರಕ, ಮಣ್ಣಿನ ಬೆಟ್ಟ, ಅದರ ಉದ್ದಳತೆ, ಎತ್ತರ, ರಚನೆ, ಕಾಲಘಟ್ಟ ಮಣ್ಣಿನ ಗುಣ ಲಕ್ಷಣ, ವಿನ್ಯಾಸ ಮೊದಲಾದವುಗಳನ್ನು ಪರಿಶೀಲಿಸಿದರು. 
 
 ಬಳಿಕ ಮಾತನಾಡಿ, `ಇದು ಸ್ಥಳೀಯರು ಹೇಳುವಂತೆ ಕೆರೆ ಯಲ್ಲಮ್ಮ ದೇವಸ್ಥಾನವಲ್ಲ. ಇದರ ಲಕ್ಷಣ 13-14ನೇ ಶತಮಾನದ ಕುಮ್ಮಟದ ಪಾಳೆಗಾರರ ಕಾಲದಲ್ಲಿ ನಿರ್ಮಾಣವಾಗಿರುವ ಕಾವಲು ಗೋಪುರದಂತೆ ಕಂಡು ಬರುತ್ತಿದೆ.
 
 ಆಡಳಿತ ಮತ್ತು ಕೋಟೆಯ ರಕ್ಷಣೆಯ ದೃಷ್ಟಿಯಿಂದ ಎತ್ತರದ ಪ್ರದೇಶವಾದ ಇಲ್ಲಿ ಗೋಪುರ ನಿರ್ಮಿಸಿರುವ ಸಾಧ್ಯತೆ ಇದೆ. ಹಾಗೆಯೆ ಕಲ್ಲಿನ ಶಿಲೆಗಳು ದೇವತೆಯದ್ದಲ್ಲ. ಆಗಿನ ಕಾಲದ ಬಾಗಿಲು. ಅದು ತುಂಡಾಗಿ ಎರಡು ಭಾಗವಾಗಿರುವ ಸಾಧ್ಯತೆ ಇದೆ' ಎಂದು ಅಭಿಪ್ರಾಯಪಟ್ಟರು.
 
 ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ಶ್ರವಣಕುಮಾರ ರಾಯ್ಕರ್, ಹಿಂದು ಜಾಗರಣ ವೇದಿಕೆ ಸಂಚಾಲಕ ನೀಲಕಂಠಪ್ಪ, ಹಕ್ಕ-ಬುಕ್ಕ ವಾಲ್ಮೀಕಿ ನಾಯಕ ವೇದಿಕೆಯ ರಾಜೇಶ ನಾಯಕ, ಕೆ. ಯಲ್ಲಪ್ಪ, ಟಿ. ಹನುಮಂತಪ್ಪ, ಕೆ. ದೇವೇಂದ್ರಪ್ಪ, ಟಿ. ಹನುಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.