ADVERTISEMENT

ಹದಗೆಟ್ಟ ರಸ್ತೆಗಳೇ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 5:50 IST
Last Updated 10 ನವೆಂಬರ್ 2012, 5:50 IST

ದೇವದುರ್ಗ: ದೇವದುರ್ಗ ಪಟ್ಟಣದ ಆಕರ್ಷಣೆ ಎಂದರೆ ಕೋಟೆ, ಕೊತಲ ಸುಂದರ ರಸ್ತೆಗಳು ಆಗಿರಬೇಕಾಗಿದ್ದರೂ ಈಗ ಭಾರಿ ಹೊಂಡಗಳಿಂದ ಕೂಡಿದ ಇಲ್ಲಿನ ರಸ್ತೆ, ವರ್ಷ ಕಳೆದರೂ ಸ್ವಚ್ಛತೆ ಇಲ್ಲದ ಮತ್ತು ಗಬ್ಬೆದ್ದು ನಾರುವ ಚರಂಡಿಗಳು.

ಆಚ್ಚರಿ ಎನಿಸಿದರೂ ಸತ್ಯವಾಗಿದ್ದು, ಪಟ್ಟಣದ ಅಭಿವೃದ್ಧಿಗಾಗಿಯೇ ಕಳೆದ ಮೂರು ವರ್ಷದ ಅವಧಿಯಲ್ಲಿ ಕೋಟಿಗಟ್ಟಲೇ ಹಣ ಹರಿದು ಬಂದರೂ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಅದೇ ಓಬೇರಾಯನ ಕಾಲದ ತೆರೆದ ಚರಂಡಿ ವ್ಯವಸ್ಥೆಯೇ ನಗರದ ಪ್ರಮುಖ ಆಕರ್ಷಣೆಯಾಗಿದ್ದು, ಬೆಳಗಾದರೆ ವಾರ್ಡ್‌ಗಳ ಜನರು ಇನ್ನಿಲ್ಲದ ತೊಂದರೆ ಎದುರಿಸುವಂತಾಗಿದೆ.

ಚರಂಡಿಗಳ ದುರಸ್ತಿ ಮತ್ತು ಸ್ವಚ್ಛತೆಗೆ ವರ್ಷಪೂರ್ತಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿರುವುದು ಒಂದು ಕಡೆ ನಿರಂತರವಾಗಿ ನಡೆದರೂ ಅದು ಅವೈಜ್ಞಾನಿಕದಿಂದ ಕೂಡಿದೆ ಎಂಬುವುದು ಪಟ್ಟಣದ ನಾಗರಿಕರ ಆರೋಪವಾಗಿದೆ.

ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಬಿಡ್ತಿ ಪಡೆದ ನಂತರ ಹದಗೆಟ್ಟ ರಸ್ತೆ, ಚರಂಡಿ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದೆ ಎಂಬ ನಾಗರಿಕರ ನಿರೀಕ್ಷೆ ಮಾತ್ರ ಹುಸಿಯಾಗಿದೆ.  ಪಟ್ಟಣದಲ್ಲಿನ ಹಳೇಯ ಚರಂಡಿಗಳ ಬದಲು ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಹರಿದು ಬಂದರೂ ಸಂಬಂಧಿಸಿದವರು ವೈಜ್ಞಾನಿಕವಾಗಿ ನಿರ್ಮಿಸದೆ ಕಾಟಾಚಾರಕ್ಕೆ ಎಂಬುವಂತೆ ನಿರ್ಮಿಸಿರುವುದರಿಂದ ಬಹುತೇಕ ವಾರ್ಡ್‌ಗಳಲ್ಲಿನ ಚರಂಡಿ ನೀರು ರಸ್ತೆಯ ಮೇಲೆ ಹರಿಯುವುದರಿಂದ ಜನರು ಅದೇ ನೀರನಲ್ಲಿ ಹೋಡಾಡಬೇಕಾದ ಪರಿಸ್ಥಿತಿ ಇದ್ದರೂ ಇತ್ತಕಡೆ ಸುಳಿದ ಪರಿಹಾರ ಕಂಡುಕೊಂಡ ಉದಾಹರಣೆ ಇಲ್ಲ.

ನಿರ್ಲಕ್ಷ್ಯ: ಪಟ್ಟಣದ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಹತ್ತಿರ ಬರುವ ಬೃಹತ್ ಕಾರದ ಚರಂಡಿಯ ಸ್ವಚ್ಛತೆಗೆ ದಶಕದಿಂದ ಇಂದಿಗೂ ಮನಸ್ಸು ಮಾಡಿಲ್ಲ. ಇಡೀ ಪಟ್ಟಣದ ಕಲುಷಿತ ನೀರು ಇದೆ ಚರಂಡಿ ಮೂಲಕ ಹಾದೂ ಹೋಗುವುದರಿಂದ ಸಾಕಷ್ಟು ಗಿಡ,ಗಂಟಿ ಬೆಳೆದು ನೀರು ಮುಂದೆ ಹೋಗದಂಥ ಪರಿಸ್ಥಿತಿ ಇರುವುದರಿಂದ ಹತ್ತಾರೂ ಹಂದಿ, ನಾಯಿ ಸತ್ತು ಬಿದ್ದ ಕಾರಣ ಪಟ್ಟಣಕ್ಕೆ ಬರುವ ಪ್ರಯಾಣಿಕರು ಬಸ್ಸಿನ ಸೀಟಿನಲ್ಲಿಯೇ ಗಟ್ಟಿಯಾಗಿ ಮೂಗು ಮುಚ್ಚಿಕೊಂಡರೇ ಇನ್ನೂ ಪಟ್ಟಣದ ನಾಗರಿಕರೂ ಒಂದು ಕೈ ಮೂಗಿಗೆ ಇನ್ನೂಂದು ಕೈ ದೂಳು ಜಾಡಿಸಿಕೊಳ್ಳಬೇಕಾದ ಅನಿವಾರ್ಯ ಎಂಬುವಂತೆ ಪುರಸಭೆ ಆಡಳಿತಕ್ಕೆ ಶಾಪ ಹಾಕಿ ಮುಂದೆ ಹೋಗಬೇಕಾಗಿದೆ.

ಇದೇ ಚರಂಡಿ ಅಕ್ಕ, ಪಕ್ಕದ ಆಸ್ಪತ್ರೆ, ವಿವಿಧ ವ್ಯಾಪಾರಸ್ಥರ ವಾಣಿಜ್ಯ ಮಳಿಗೆಗಳು ಪುರಸಭೆಯ ನಿರ್ಲಕ್ಷ್ಯತನದಿಂದ ಮುಂಜಾನೆಯಿಂದ ಸಂಜೆವರಿಗೂ ಚರಂಡಿಯ ಗಬ್ಬೆದ್ದು ನಾರುವ ವಾಸನೆ ಕುಡಿಯಬೇಕಾಗಿದೆ. ಈ ಎಲ್ಲ ಅವ್ಯವಸ್ಥೆಯಿಂದ ಚರಂಡಿಗಳು ಇದ್ದರೂ ಸ್ವಚ್ಚತೆಗೆ ಏಕೆ ಮುಂದಾಗಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

ಅಪಸ್ವರ: ಒಂದು ಕಡೆ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಳ ಬಗ್ಗೆ ಮುಂಜಾಗೃತ ವಹಿಸುವುದಕ್ಕಾಗಿಯೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಏನ್ನಲ್ಲ ಖರ್ಚು ಮಾಡಿದರೂ ಪ್ರಯೋಜನೆ ಇಲ್ಲದಂತಾಗಿದೆ. ಕಳೆದ ಆರು ತಿಂಗಳ ಈಚೆಗೆ ಪಟ್ಟಣದಲ್ಲಿ ಡೆಂಗು ಪ್ರಕರಣಗಳು ಹೆಚ್ಚಾಗಿ ಕಂಡು ಬಂದರೂ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗದೆ ಇರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.