ADVERTISEMENT

ಹನುಮಾವಧೂತರ ಜಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 11:12 IST
Last Updated 15 ಏಪ್ರಿಲ್ 2013, 11:12 IST
ಹನುಮಸಾಗರ ಸಮೀಪದ ಸೇಬಿನಕಟ್ಟೆಯಲ್ಲಿರುವ ಮುತ್ಯಾನಕಟ್ಟೆಯಲ್ಲಿ ನಡೆಯಲಿರುವ ಹನುಮಾವಧೂತರ ಜಾತ್ರೆಗೆ ಯರಗೇರಾ ಗ್ರಾಮದಿಂದ ಕಳಸ ಹೊತ್ತು ಓಡುತ್ತಿರುವ ಯುವಕರು (ಸಂಗ್ರಹ ಚಿತ್ರ)
ಹನುಮಸಾಗರ ಸಮೀಪದ ಸೇಬಿನಕಟ್ಟೆಯಲ್ಲಿರುವ ಮುತ್ಯಾನಕಟ್ಟೆಯಲ್ಲಿ ನಡೆಯಲಿರುವ ಹನುಮಾವಧೂತರ ಜಾತ್ರೆಗೆ ಯರಗೇರಾ ಗ್ರಾಮದಿಂದ ಕಳಸ ಹೊತ್ತು ಓಡುತ್ತಿರುವ ಯುವಕರು (ಸಂಗ್ರಹ ಚಿತ್ರ)   

ಹನುಮಸಾಗರ: ಸಮೀಪದ ಸೇಬಿನಕಟ್ಟೆ ಗ್ರಾಮದಲ್ಲಿ ಸೋಮವಾರ ನಡೆಯಲಿರುವ ಹನುಮಾವಧೂತರ ಜಾತ್ರಾ ಮಹೋತ್ಸವ ನಾಡಿನಲ್ಲಿ ನಡೆಯುವ ಉಳಿದೆಲ್ಲ ಜಾತ್ರೆಗಳಿಗಿಂತ ವಿಭಿನ್ನ.

ನಾಡಿಗೆ ಹಸಿರು ಹೊದಿಸುವ ಕನಸು ಕಂಡಿದ್ದ ಈ ತಾತ ಸೇಬಿನಕಟ್ಟೆ ದೇಸಾಯಿಯವರು ನೀಡಿದ್ದ ಸುಮಾರು 26 ಎಕರೆ ಪ್ರದೇಶದಲ್ಲಿ ಮಾವಿನ ಮರಗಳನ್ನು ಬೆಳೆಸಿದ್ದರು. ಈಗಲೂ ಕೆಲ ಮರಗಳು ಉಳಿದಿವೆ. ಅಲ್ಲದೆ ಅವುಗಳಿಗೆ ನೀರುಣಿಸುವುದಕ್ಕಾಗಿ ತಾವೇ ಬಾವಿ ತೋಡಿದ್ದರು ಎಂದು ದೇಸಾಯಿ ಮನೆತನದ ಗುರುರಾಜ ದೇಸಾಯಿ ಹೇಳುತ್ತಾರೆ.

ಕೇವಲ ಮಾವಿನಮರಗಳನ್ನೇ ಬೆಳೆಸುತ್ತಿದ್ದ ಈ ತಾತ ತನ್ನಲ್ಲಿ ಬರುವ ಭಕ್ತರೂ ಗಿಡಮರಗಳನ್ನು ಪ್ರೀತಿಸಲಿ ಎಂಬ ಕಾರಣದಿಂದ ಕುಟುಂಬದ ಹೆಸರುಗಳನ್ನು ಒಂದೊಂದು ಮರಗಳಿಗೆ ಇಟ್ಟಿದ್ದರಿಂದ ಅಲ್ಲಿಗೆ ಬರುವ ಅಸಂಖ್ಯಾತ ಭಕ್ತರು ತಮ್ಮ ಹೆಸರಿನಿಂದ ಕರೆಯುವ ಈ ಮಾಮರಗಳ ಕೆಳಗೆ ಈಗಲೂ ಕೂಡುತ್ತಾರೆ.

ಸದಾ ಸಂಚಾರಿಯಾಗಿದ್ದ ಈ ಅವಧೂತರು ಸುತ್ತಲಿನ ಗ್ರಾಮಗಳಲ್ಲಿ ಅಲೆದಾಡಿ ರಾತ್ರಿ ಹೊತ್ತಿನಲ್ಲಿ ಸೇಬಿನಕಟ್ಟೆಯಲ್ಲಿ ವಾಸವಾಗುತ್ತಿದ್ದರು.

ಭಕ್ತರು ಈ ಅವಧೂತರಿಂದ ಕುಟುಂಬದ ಕೆಲ ತಾಪತ್ರೆಯಗಳನ್ನು ಪರಿಹರಿಸಿಕೊಂಡ ಕಾರಣವಾಗಿ ಸೇಬಿನಕಟ್ಟೆ ಗ್ರಾಮದಿಂದ ಕಳಸ, ಕುಂಬಳಾವತಿ ಗ್ರಾಮದಿಂದ ರಥದ ಹಗ್ಗ, ಮದ್ನಾಳ ಗ್ರಾಮದಿಂದ ನಂದಿಕೋಲು ಬರುತ್ತದೆ. ಈ ಸಂಪ್ರದಾಯ ಇಂದು ನಿನ್ನೆಯದಲ್ಲ ಇದಕ್ಕೆ ನೂರಾರು ವರ್ಷದ ಇತಿಹಾಸವಿದೆ. ಹೀಗೆ ಕಳಸ, ಹಗ್ಗ, ನಂದಿಕೋಲು ಹೊತ್ತು ಬರುವವರಿಗೆ ನಾವು ಆತಿಥ್ಯ ನೀಡಿ ಬಟ್ಟೆ ಉಡುಗೊರೆ ನೀಡುವುದು ಪರಂಪರೆಯಾಗಿದೆ ಎಂದು ಕೃಷ್ಣಮೂರ್ತಿ ದೇಸಾಯಿ ಹೇಳುತ್ತಾರೆ.

ಹಲವಾರು ಪವಾಡಗಳನ್ನು ಮಾಡುತ್ತಾ ಸಮಾಜದ ಓರೆಕೋರೆಗಳನ್ನು ತಿದ್ದಲು ಯತ್ನಿಸಿ ಯಶಸ್ವಿಯಾದ ಈ ಅವಧೂತರು ಪ್ರಾಪಂಚಿಕ ಆಸೆಗಳನ್ನು ಬಿಟ್ಟು ಅವತಾರಿ ಪುರುಷರಾಗ್ದ್ದಿದ ಬಗ್ಗೆ ಕೆಲ ಗ್ರಂಥಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಜಾತ್ರೆಯ ಬಗ್ಗೆ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ವಿಶೇಷವಾದ ಅಭಿಮಾನವಿದೆ. ಕೊಪ್ಪಳ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳ ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ.

ಏ. 15ರಂದು ಮಧ್ಯಾಹ್ನ ಯರಗೇರಾ ಗ್ರಾಮದ ಸಮಾಜದವರಿಂದ ವಿವಿಧ ಪೂಜೆಗೊಳಪಟ್ಟು ಅಂಲಂಕಾರಗೊಂಡ ಕಳಸವನ್ನು ಯುವಕರು ಹೊತ್ತುಕೊಂಡು ಓಡುತ್ತಾ ಹನುಮಸಾಗರಕ್ಕೆ ಬರುತ್ತಾರೆ.

ಮೂಲತಂ ಸೇಬಿನಕಟ್ಟೆಯವರಾದ ಇಲ್ಲಿನ ಕೃಷ್ಣಮೂರ್ತಿ ದೇಸಾಯಿಯವರು ತಮ್ಮ ಮನೆಗೆ ಬರುವ ಹನುಮಾವಧೂತರ ಕಳಸ, ನಂದಿಕೋಲು, ಹಗ್ಗ, ಮುತ್ಯಾ ಆ ಸಮಯದಲ್ಲಿ ಬಳಸುತ್ತಿದ್ದ ಕೋವಿಯನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡು ಪೂಜೆ ಸಲ್ಲಿಸುತ್ತಾರೆ.
ಕೊಂಚ ಸಮಯ ವಿಶ್ರಾಂತಿ ಬಳಿಕ ಮತ್ತೆ ಕಳಸದೊಂದಿಗೆ ದಂಡು ಸೇಬಿನಕಟ್ಟೆಯತ್ತ ಸಾಗುತ್ತದೆ.

ಮುತ್ಯಾನಕಟ್ಟೆಗೆ ಕಳಸ ಬಂದ ನಂತರ ಸಂಭ್ರಮದ ರಥೋತ್ಸವ ಜರುಗುತ್ತದೆ. ಮೂರು ದಿನಗಳ ವರೆಗೆ ನಡೆಯುವ ಈ ಜಾತ್ರೆಗೆ ಬರುವ ಭಕ್ತರು ಮುತ್ಯಾ ಬೆಳೆಸಿದ ಮಾಮರದ ಕೆಳಗೆ ವಾಸ್ತವ್ಯ ಹೂಡುವುದು ವಿಶೇಷವಾಗಿರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.