ADVERTISEMENT

ಹುಲಿಗಿ ಜನತೆಗೆ ಸರ್ಕಾರಿ ಆಸ್ಪತ್ರೆ ಕೊಡುಗೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:50 IST
Last Updated 28 ಜನವರಿ 2012, 10:50 IST

ಮುನಿರಾಬಾದ್: ಸಮೀಪದ ಹುಲಿಗಿ ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರ ಗಣರಾಜ್ಯೋತ್ಸವದ ಕೊಡುಗೆಯಾಗಿ ಗುರುವಾರ ಗ್ರಾಮದಲ್ಲಿ ಕಾರ್ಯಾರಂಭಗೊಂಡಿತು.
ಕ್ಷೇತ್ರದ ಶಾಸಕ ಸಂಗಣ್ಣ ಕರಡಿ ಗ್ರಾಮದ ಹಳೆ ಪ್ರೌಢಶಾಲೆಯ ತಾತ್ಕಾಲಿಕ ಕಟ್ಟಡದಲ್ಲಿ ಟೇಪ್ ಕತ್ತರಿಸುವ ಮೂಲಕ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದರು.
 
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಗಣ್ಣ, ಸ್ಥಳೀಯ ಆಡಳಿತ, ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಮಂಜೂರಿಗೆ ಕಾರಣರಾದ ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು ಅಭಿನಂದನೆಗೆ ಅರ್ಹರು. ಸರ್ಕಾರಿ ವೈದ್ಯರ ಕೊರತೆ ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಇದ್ದುದರಲ್ಲೇ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಆತ್ಮೀಯ, ಮಾನವೀಯ ಸಂಬಂಧವನ್ನು ಬೆಳೆಸಿಕೊಂಡು ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಮಾರಂಭವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಗುಡಿ ಕಟ್ಟಿದರೆ ಸಾಲದು, ಅದರಲ್ಲಿ ದೇವರನ್ನೂ ಕೂಡಿಸಬೇಕು ಎಂದು ವೈದ್ಯರ ನಿಯೋಜನೆಯ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಮನ ಹರಿಸಬೇಕು ಎಂದರು. ವೇದಿಕೆಯಲ್ಲಿದ್ದ ಜನಶಕ್ತಿ ಹೋರಾಟ ಸಮಿತಿ ಹಾಗೂ ಕಾರ್ಮಿಕ ಮುಖಂಡ ಪಂಪಾಪತಿ ರಾಟಿ, ಹತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ಗ್ರಾಮಕ್ಕೆ ಆಸ್ಪತ್ರೆ ಬಂದಿದೆ. 

ಜಿಲ್ಲಾ ಆರೋಗ್ಯಾಧಿಕಾರಿ ಮಹದೇವಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಜನಾರ್ಧನ, ಡಿ.ಬಿ.ದೇಸಾಯಿ, ಬಿಇಒ ಉಮೇಶ ಪೂಜಾರ್, ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ನಾಯಕ್ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಶರಣಪ್ಪ ಸಜ್ಜನ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಮಾದೇವಿ ಸೋ.ಮೇಟಿ, ಪಿಎಸ್‌ಐ ವಿಶ್ವನಾಥ ಹಿರೇಗೌಡರ್ ವೇದಿಕೆಯಲ್ಲಿದ್ದರು. ಎಸ್‌ಡಿಎಮ್‌ಸಿ ಅಧ್ಯಕ್ಷ ಜಿಯಾಸಾಬ್, ಸದಸ್ಯರಾದ ಶಂಕರಗೌಡ, ವೆಂಕಟರಾವ್, ರಂಗಮ್ಮ, ಪಾಲಾಕ್ಷಪ್ಪ, ರಾಮಣ್ಣ, ನಾರಾಯಣ, ಹುಸೇನ್‌ಪೀರಾ, ರಾಮಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭುರಾಜ ಪಾಟೀಲ್, ಕೊಟ್ರಯ್ಯಸ್ವಾಮಿ, ಮಂಜುನಾಥ ಮೇಟಿ, ಕರವೇದ ಮೋಯಿದ್ದೀನ್, ಸುಭಾಸ, ಖಾಜಾವಲಿ ಕಿನ್ನಾಳ, ವಸಂತಕುಮಾರ್ ಇತರರು ಇದ್ದರು. ಸರಸ್ವತಿ ಪ್ರಾರ್ಥಿಸಿದರು. ಉಮೇಶ ಸುರ್ವೆ ಸ್ವಾಗತಿಸಿದರು. ಆರ್.ಎಮ್.ಪೂಜಾರ್ ನಿರೂಪಿಸಿದರು. ಅಜ್ಜಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.