ADVERTISEMENT

ಹೆಸರು ಬೆಳೆಗೆ ಮಳೆ ಆಸರೆ

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 14:13 IST
Last Updated 19 ಜೂನ್ 2018, 14:13 IST
ಹನುಮಸಾಗರ ಸಮೀಪದ ಬೆನಕನಾಳ ಗ್ರಾಮದ ಶಿವಕುಮಾರ ಕೋರಿ ಅವರ ಜಮೀನಿನಲ್ಲಿ ಮಿಂಚು ಹೆಸರು ಬಳ್ಳಿ ಉತ್ತಮವಾಗಿ ಬೆಳೆದು ನಿಂತಿರುವುದು
ಹನುಮಸಾಗರ ಸಮೀಪದ ಬೆನಕನಾಳ ಗ್ರಾಮದ ಶಿವಕುಮಾರ ಕೋರಿ ಅವರ ಜಮೀನಿನಲ್ಲಿ ಮಿಂಚು ಹೆಸರು ಬಳ್ಳಿ ಉತ್ತಮವಾಗಿ ಬೆಳೆದು ನಿಂತಿರುವುದು   

ಹನುಮಸಾಗರ: ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಆಗಿದ್ದು, ರೈತರು ಬಿತ್ತನೆ ಮಾಡಿರುವ ಹೆಸರು ಬೆಳೆ ಉತ್ತಮ ಹಂತದಲ್ಲಿದೆ.

ನಾಲ್ಕು ವರ್ಷಗಳಿಂದ ಹೆಸರು ಬೆಳೆ ಬಿತ್ತನೆಗಷ್ಟೆ ರೈತರು ಸೀಮಿತವಾಗಿದ್ದರು. ಬಿತ್ತನೆಯ ನಂತರದಲ್ಲೂ ಉತ್ತಮವಾಗಿ ಮಳೆಯಾಗಿದ್ದರಿಂದ ಈ ಬಾರಿ ಹೆಸರು ಬೆಳೆ, ಬಿತ್ತನೆ ಮಾಡಿದ ರೈತರ ಕೈಹಿಡಿಯುವ ಲಕ್ಷಣಗಳು ಕಾಣುತ್ತಿವೆ.

ಈ ಭಾಗದ ಬೆನಕನಾಳ ಮಡಿಕ್ಕೇರಿ, ಮಲಕಾಪುರ, ಅಡವಿಭಾವಿ, ಹೂಲಗೇರಿ, ಚಳಗೇರಿ, ಮಡಿಕ್ಕೇರಿ ಭಾಗಗಳಲ್ಲಿ ಹೆಸರು ಬಳ್ಳಿ ಅಬ್ಬರವಾಗಿ ಬೆಳೆಯುತ್ತಿರುವುದು ಕಂಡು ಬರುತ್ತಿದೆ.

ADVERTISEMENT

ಮಿಂಚು ಹೆಸರು ಬೆಳೆ ಉತ್ತಮವಾಗಿ ಬಂದರೂ ನಂತರದಲ್ಲಿ ಹಳದಿ ರೋಗಕ್ಕೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಸರು ಬಿತ್ತನೆ ಪ್ರಮಾಣ ಕಡಿಮೆಯಾಗಿದೆ ಎಂದು ರೈತರು ಹೇಳುತ್ತಾರೆ.

‘ಹಿಂದಿನ ವರ್ಷ ಇದೇ ರೀತಿ ಉತ್ತಮ ಆಸೆ ತೋರಿಸಿದ್ದ ಮಳೆ, ಹೆಸರು ಹೂವು ಬಿಡುವ ಈ ಹಂತದಲ್ಲಿ ಕೈಕೊಟ್ಟಿದ್ದರಿಂದ ಬೆಳೆ ಬಾಡಿ ಹಳದಿ ರೋಗಕ್ಕೆ ಬಲಿಯಾಯಿತು. ಸದ್ಯ ಹೆಸರು ಬೆಳೆಗೆ ಯಾವುದೇ ರೋಗವಿಲ್ಲದಿರುವುದು ಸಂತಸದ ಸಂಗತಿ’ ಎಂದು
ಬೆನಕನಾಳ ಗ್ರಾಮದ ರೈತ ಶಿವುಕುಮಾರ ಕೋರಿ ಹೇಳಿದರು.

ಕೇವಲ ಮೂರು ತಿಂಗಳ ಅವಧಿಯಲ್ಲಿ ಕೊಯ್ಲಿಗೆ ಬರುವ ಈ ಬೆಳೆ ಕೈತುಂಬ ಕಾಸು ದೊರಕಿಸುವುದರ ಜೊತೆಗೆ ಮುಂದಿನ ಎರಡನೇ ಬೆಳೆಗೂ ಅವಕಾಶ ದೊರಕಿಸಿಕೊಡುತ್ತದೆ ಎಂಬ ಕಾರಣದಿಂದ ಹಾಗೂ ಹೆಸರು ಬಿತ್ತಿದ ಜಮೀನು ಉದುರೆಲೆಗಳಿಂದ ಫಲವತ್ತಾಗುತ್ತದೆ ಎಂದು ರೈತರು ಹೆಸರು ಬಿತ್ತನೆಗೆ ಮುಂದಾಗುತ್ತಾರೆ.

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಮೆಣಸಗೇರಿ, ಕಡೆಕೊಪ್ಪ, ತೋಪಲಕಟ್ಟಿ, ಅಡವಿಭಾವಿ, ಹುಲಸಗೇರಿ, ಮಿಯಾಪುರ, ಹನುಮಗಿರಿ, ಹೊಸಹಳ್ಳಿ, ಚಳಗೇರಿ ಗ್ರಾಮಗಳಲ್ಲಿ ಈ ಬಾರಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ.

ಸದ್ಯ ಹೆಸರು ಬೆಳೆಗೆ ಯಾವುದೇ ರೋಗವಿಲ್ಲ ಎಂದು ರೈತರು ಸುಮ್ಮನೆ ಕೂಡಬಾರದು. ಸಾಮಾನ್ಯವಾಗಿ ಹೆಸರು ಬೆಳೆಗೆ ಕಾಯಿ ಕಟ್ಟುವ ಹಂತದಲ್ಲಿ ಹಳದಿ ರೋಗ ವೈರಸ್‌ನಿಂದ ಹಬ್ಬುತ್ತದೆ. ಒಂದು ಬಾರಿ ಹಳದಿ ರೋಗ ಬಂದರೆ ನಿಯಂತ್ರಿಸುವುದು ಕಷ್ಟ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಆರ್‌. ಭಜಂತ್ರಿ ರೈತರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.