ಗಂಗಾವತಿ: ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಸರ್ಕಾರದಲ್ಲಿ ಮೂವರು ಸಿಎಂಗಳ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಲಾಗದ ಅಸಹಾಯಕ ರಾಜ್ಯ ಬಿಜೆಪಿಗರು ಮೋದಿಯ ಜಪ ಮಾಡಿಕೊಂಡು ಚುನಾವಣೆಗೆ ಇಳಿದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಪರವಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ, ನಗರದ ಪಾಡಗುತ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐದು ವರ್ಷದಲ್ಲಿ ಮೂವರು ಸಿಎಂ ಮಾಡಿದ ಕೆಲಸಗಳನ್ನು ಹೇಳಿಕೊಂಡು ಜನರ ಬಳಿಗೆ ಹೋದರೆ ಮತದಾರರು ನಿರ್ಲಕ್ಷಿಸುತ್ತಾರೆ ಎಂದು ಮನಗಂಡ ಬಿಜೆಪಿಗರು ಮೋದಿ ಜಪ ಮಾಡಿಕೊಂಡು ಚುನಾವಣೆಯ ಕಣಕ್ಕಿಳಿದ್ದಾರೆ ಎಂದು ವ್ಯೆಂಗ್ಯವಾಡಿದರು.
ಸಾಮಾಜಿಕ ಸಮಾನತೆ ಕೇವಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿಕೆ ನೀಡಿರುವ ಕರಡಿ ಸಂಗಣ್ಣರಿ ಗಿಂತ ಬಿಜೆಪಿಯಲ್ಲಿನ ಸಂಸ್ಕೃತಿ, ಸಂಸ್ಕಾರಗಳೇನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. 53 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ನಲ್ಲಿ ಕೇವಲ ಏಳು ಜನ ಪ್ರಧಾನಿಗಳಾದರೆ, ಕೇವಲ 13 ವರ್ಷ ಆಳಿದ ಕಾಂಗ್ರೇಸೇತರ ಸರ್ಕಾರದಲ್ಲಿ ಏಳು ಜನ ಪ್ರಧಾನಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾತ್ರ ದೇಶಕಟ್ಟಲು ಸಾಧ್ಯ ಎಂದರು.
ಅಭ್ಯರ್ಥಿ ಬಸವರಾಜ ಹಿಟ್ನಾಳ್ ಮಾತನಾಡಿ, ಕೇವಲ ಒಂಭತ್ತು ತಿಂಗಳಲ್ಲಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಹನ್ನೊಂದು ಜನಪರ ಯೋಜನೆ ಹಾಗೂ ಕೇಂದ್ರದ ಯುಪಿಎ ಸರ್ಕಾರದ ಸಾಧನೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರಾದ ಹಂಪನಗೌಡ ಬಾದರ್ಲಿ ಸಿಂಧನೂರು, ಪ್ರತಾಪಗೌಡ ಮಸ್ಕಿ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಮಾಜಿ ಶಾಸಕರಾದ ಎಚ್.ಆರ್. ಶ್ರೀನಾಥ್, ಅಮರೇಗೌಡ ಬಯ್ಯಾಪುರ ಇತರರು ಮಾತನಾಡಿ ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜನಾರ್ದನ ಹುಲಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಪ್ರಮುಖರಾದ ಎಚ್.ಎಸ್. ಭರತ್, ಬಸವರಾಜ ಮಳೇಮಠ, ಹನುಮಂತಪ್ಪ ನಾಯಕ, ಮರಿಯಪ್ಪ ಕುಂಟೋಜಿ, ದೊಡ್ಡಪ್ಪ ದೇಸಾಯಿ, ಕಾಮದೊಡ್ಡಿ ದೇವಪ್ಪ, ರಾಜು ನಾಯಕ್, ಎಸ್.ಬಿ. ರೆಡ್ಡಿ ಇತರರಿದ್ದರು.
ದೂರ ಉಳಿದ ಮಾಜಿ ಸಚಿವ: ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಶನಿವಾರ ನಡೆದ ಪಕ್ಷದ ಚುನಾವಣಾ ಪ್ರಚಾರ ಸಭೆಯಿಂದ ದೂರ ಉಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.