ADVERTISEMENT

ಪ್ರತಿಮೆ, ಸಮುದಾಯ ಭವನಕ್ಕೆ ₹10 ಲಕ್ಷ

ಕನಕದಾಸರ ಕಂಚಿನ ಪ್ರತಿಮೆ ಅನಾವರಣ; ಸಚಿವ ಎಂಟಿಬಿ ನಾಗರಾಜ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 5:43 IST
Last Updated 29 ನವೆಂಬರ್ 2022, 5:43 IST
ಗಂಗಾವತಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆಯನ್ನು ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ ಅನಾವರಣಗೊಳಿಸಿದರು
ಗಂಗಾವತಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆಯನ್ನು ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ ಅನಾವರಣಗೊಳಿಸಿದರು   

ಗಂಗಾವತಿ: ‘ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸುವ ಕನಕದಾಸರ ಪ್ರತಿಮೆ ಅಥವಾ ಸಮುದಾಯ ಭವನಕ್ಕೆ ₹10 ಲಕ್ಷ ನೆರವು ನೀಡಲಾಗುವುದು’ ಎಂದುಪೌರಾಡಳಿತ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ. ನಾಗರಾಜ ತಿಳಿಸಿದರು.

ನಗರದ ಹೊಸಳ್ಳಿ ರಸ್ತೆಯಲ್ಲಿನ ಕನಕದಾಸ ವೃತ್ತದಲ್ಲಿ ತಾಲ್ಲೂಕು ಕನಕದಾಸ ಕುರುಬ ಸಂಘದಿಂದ ನಿರ್ಮಿಸಲಾದ ಕನಕದಾಸರ ಕಂಚಿನ ಪ್ರತಿಮೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣ ಮಾಡಿದರೆ ₹5 ಲಕ್ಷ ನೀಡಲಾಗುವುದು. ಹೊಸಳ್ಳಿಯಲ್ಲಿ ಹಾಲುಮತ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹10 ಲಕ್ಷ, ಬೀರಲಿಂಗೇಶ್ವರ ದೇವಸ್ಥಾನಕ್ಕೆ ₹5 ಲಕ್ಷ ನೀಡುವೆ’ ಎಂದು ಘೋಷಣೆ ಮಾಡಿದರು.

ADVERTISEMENT

‘ಹಣಗಳಿಸಲು ರಾಜಕೀಯಕ್ಕೆ ಬಂದಿಲ್ಲ. ಸಮಾಜ, ಸಮುದಾಯ, ಕೆಳ ವರ್ಗದವರ ಅಭಿವೃದ್ಧಿಗಾಗಿ ಬಂದಿರುವೆ. ರಾಜ್ಯದಲ್ಲಿ ಹಾಲುಮತ ಸಮಾಜ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸಮಾಜದ ಎಸ್ಟಿ ಮೀಸಲಾತಿ ಬಗ್ಗೆ ಈಗಾಗಲೇ ಹಲವು ಬಾರಿ ಸಭೆಗಳು ನಡೆದಿದ್ದು, ಸಕರಾತ್ಮಕ ನಿರ್ಣಯ ಹೊರಬರಲಿದೆ. ಹಾಲುಮತ ಸಮುದಾಯಕ್ಕೆ ರಾಜರ, ಪಾಳೆಗಾರರ, ಬ್ರಿಟಿಷರ ಆಳ್ವಿಕೆ ಯಿಂದಲೂ ಇತಿಹಾಸವಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ, ಅಭಿವೃದ್ಧಿಗೆ ಹಲವರು ಜೀವಬಲಿ ಕೊಟ್ಟಿದ್ದಾರೆ’ ಎಂದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ‘ದಾಸರಲ್ಲಿ ಶ್ರೇಷ್ಠರು ಕನಕದಾಸರು. 15ನೇ ಶತಮಾನದಲ್ಲೇ ಕುಲ ಕುಲವೆಂದು ಹೊಡೆದಾಡದೆ ಮಾನವ ಸಂಕುಲ ಎಂಬ ಸತ್ಯದ ಸಂದೇಶ ಸಾರಿ ಸಂತರಾಗಿದ್ದಾರೆ. ಅಂಥ ಶ್ರೇಷ್ಠ ದಾಸರ ಪುತ್ಥಳಿ ಅನಾವರಣ ಮಾಡಿದ್ದು ಹೆಮ್ಮೆಯ ಸಂಗತಿ’ ಎಂದರು.

ಹಾಲುಮತ ಸಮಾಜದ ಕೆ.ವಿರೂಪಾಕ್ಷಪ್ಪ ಮಾತನಾಡಿ ‘ಕನಕದಾಸರ, ಗೌತಮ ಬುದ್ಧ, ಸ್ವಾಮಿ ವಿವೇಕಾನಂದ ತತ್ವಗಳ ಆಧಾರದಡಿಯೇ ಸಂವಿಧಾನ ರಚನೆಯಾಗಿದ್ದು, ಅದರಲ್ಲಿನ ಅಂಶಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು’ ಎಂದರು.

ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ, ತಾಲ್ಲೂಕು ಕುರುಬ ಸಂಘಟನೆಯಿಂದ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ನಗರದಲ್ಲಿ ಹಾಲುಮತ ಸಮಾಜದ ಯುವಕರು ಬೈಕ್ ರ್‍ಯಾಲಿ ನಡೆಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ, ಹಾಲುಮತ ಸಮಾಜದ ಸಿದ್ದರಾಮಯ್ಯ ಸ್ವಾಮಿ, ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸಂತೋಷ ಕೆಲೋಜಿ, ನವೀನ್ ಮಾಲಿಪಾಟೀಲ ಸೇರಿ ಹಾಲುಮತ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.