ADVERTISEMENT

‘ಸರ್ಕಾರದಿಂದ ರೈತರಿಗೆ ವಂಚನೆ’

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 7:22 IST
Last Updated 8 ಜನವರಿ 2018, 7:22 IST

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ಒಯ್ಯುವ ಮೂಲಕ ರಾಜ್ಯ ಸರ್ಕಾರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಚ್.ಎಂ. ತಿಪ್ಪೆರುದ್ರಸ್ವಾಮಿ ಆರೋಪಿಸಿದರು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣೆಗಾಗಿ ಹಮ್ಮಿಕೊಳ್ಳಬೇಕಿರುವ ಹೋರಾಟದ ಬಗ್ಗೆ ರೈತರೊಂದಿಗೆ ಭಾನುವಾರ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುವ ಬದಲಿಗೆ ಸರ್ಕಾರ, ನೀರಿನ ಕೊರತೆಯ ಮಧ್ಯೆಯೂ ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ಕುಡಿಯುವ ನೀರು ನೀಡುವ ಯೋಜನೆಗೆ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸದ್ಯ ಜಲಾಶಯದಲ್ಲಿ ಲಭ್ಯ ಇರುವ ನೀರಿನಲ್ಲಿ ಮಾರ್ಚ್‌ ಮಧ್ಯಭಾಗದವರೆಗೂ ಎರಡನೇ ಬೆಳೆಗೆ ನೀರು ಹರಿಸಲು ಸಾಧ್ಯ. ಆದರೆ, ಅಧಿಕಾರಿಗಳು ಫೆ.28ರವರೆಗೆ ಮಾತ್ರ ನೀರು ಕೊಡಲು ಸಾಧ್ಯ ಎಂದು ಹೇಳುತ್ತಿದ್ದಾರೆ ಎಂದರು.

ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕೂಡಲೆ ಗಮನ ಹರಿಸಿ ಎರಡನೇ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬುವುದರ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಜಲಾಶಯದ ಹೂಳು ಎತ್ತಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ಸಮನಾಂತರ ಜಲಾಶಯ ಯೋಜನೆ ರೂಪಿಸುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಹಿರಿಯ ಮುಖಂಡರಾದ ಎಚ್.ಎಂ. ಸಿದ್ದರಾಮಯ್ಯ ಸ್ವಾಮಿ, ಟಿವಿಎಸ್ ಸತ್ಯನಾರಾಯಣ ಬಾಪಿರೆಡ್ಡಿ ಕ್ಯಾಂಪ್ ಕೆಎಂಎಫ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ. ಸತ್ಯನಾರಾಯಣ, ರೈತ ಮುಖಂಡ ಮಲ್ಲಿಕಾರ್ಜುನಗೌಡ ಪೊಲೀಸ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.