ಕಾರಟಗಿ: ನಾಲ್ಕೂವರೆ ದಶಕಗಳ ಸತತ ಯತ್ನ, ಹೋರಾಟ, ಪರಿಶ್ರಮದ ಫಲವಾಗಿ ತಾಲ್ಲೂಕು ಆಗಿದೆ ಎಂದು ಮಾಜಿ ಸಚಿವ, ಹೋರಾಟ ಸಮಿತಿ ಗೌರವಾಧ್ಯಕ್ಷ ಸಾಲೋಣಿ ನಾಗಪ್ಪ ಹೇಳಿದರು.
ಭಾನುವಾರ ಸಂಜೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಹೋರಾಟ ಸಮಿತಿ ಮಾಜಿ ಅಧ್ಯಕ್ಷ ದಿ. ತಿಮ್ಮನಗೌಡ ಚಳ್ಳೂರ ವೇದಿಕೆಯಲ್ಲಿ, ಕಾರಟಗಿ ತಾಲ್ಲೂಕು ರಚನಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ , ಹೋರಾಟಕ್ಕೆ ಕೈ ಜೋಡಿಸಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ 43 ತಾಲ್ಲೂಕು ಘೋಷಿಸಿ ತಾಲ್ಲೂಕಿಗೆ ತಲಾ 2 ಕೋಟಿ ಅನುದಾನ ನೀಡಿತ್ತು. ಕಾಂಗ್ರೆಸ್ ಸರ್ಕಾರ ಚುನಾವಣೆ ಹೊಸ್ತಿಲಲ್ಲಿ 50 ತಾಲ್ಲೂಕು ಘೋಷಿಸಿ, ಅನುದಾನ ನೀಡಿಲ್ಲ. ತಾಲ್ಲೂಕು ಘೋಷಿಸಿದರೆ ಸಾಲದು. ಕಟ್ಟಡ, ಅಧಿಕಾರಿಗಳ ನೇಮಕ, ಜನಸಾಮಾನ್ಯರಿಗೆ ಸೇವೆ ದೊರಕುವಂತೆ ಮಾಡಬೇಕು ಇಲ್ಲದಿದ್ದರೆ ಜನರಿಗೆ ಮೋಸ ಮಾಡಿದಂತಾಗುವುದು ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಅಭಿವೃದ್ಧಿ ಕಾರ್ಯಕ್ಕೆ ರಾಜಕೀಯ ಮರೆತು ಕೈಜೋಡಿಸುವೆ. ಶಾಸಕ ತಂಗಡಗಿ ಪೂರ್ಣ ಪ್ರಮಾಣದ ತಾಲ್ಲೂಕು ರಚನೆ, ಜನರಿಗೆ ಲಾಭ ದೊರೆಯುವಂತೆ ಮಾಡುವ ಜವಬ್ದಾರಿ ನಿರ್ವಹಿಸಬೇಕು. ಇಲ್ಲದಿದ್ದರೆ ಜನರು ಪಾಠ ಕಲಿಸುತ್ತಾರೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಶಿವರಾಜ್ ತಂಗಡಗಿ ಮಾತನಾಡಿ, ಮಾಜಿ ಸಚಿವ ಸಾಲೋಣಿ ಅವರು ಸೇರಿದಂತೆ ಇತರರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು, ಹಂತ ಹಂತವಾಗಿ ಪೂರ್ಣ ಪ್ರಮಾಣದ ತಾಲ್ಲೂಕು ಮಾಡಲಾಗುವುದು. ಅಧಿಕಾರಿಗಳನ್ನು ನಿಯೋಜಿಸುವಂತೆ ಆದೇಶ ಬಂದಿದೆ. ಶೀಘ್ರವೇ ತಹಶೀಲ್ದಾರ್ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ಎಸ್. ಇ. ಪ್ರಹ್ಲಾದ ಶ್ರೇಷ್ಠಿ ಪ್ರಾಸ್ತಾವಿಕ ಮಾತನಾಡಿ, ಹೋರಾಟದ ಯಶಸ್ವಿಗೆ, ಫಲಕ್ಕೆ ಅನೇಕರು ಕಾರಣರಾಗಿದ್ದು, ಕಾರಟಗಿ, ಸಿದ್ದಾಪುರ, ನವಲಿ ಹೋಬಳಿ ವಿವಿಧ ಗ್ರಾಮಗಳ ನಾಗರಿಕರು, ಸಂಘಟನೆಗಳು, ಸಮಾಜಗಳು ಕಾರಣವಾಗಿವೆ. ಅನೇಕ ಜನಪ್ರತಿನಿಧಿ ಸಹಕಾರ ನೀಡಿದ್ದಾರೆ ಅವರಿಗೆ ಎಷ್ಟೆ ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.
ಮಾಜಿ ಸಚಿವ ಶ್ರೀರಂಗದೇವರಾಯಲು, ಎಂ. ಮಲ್ಲಿಕಾರ್ಜುನ ನಾಗಪ್ಪ, ಹೋರಾಟ ಸಮಿತಿ ಉಪಾಧ್ಯಕ್ಷ ಬಿ. ಜಿ. ಅರಳಿ ಮಾತನಾಡಿ, ನಿಮ್ಮ ಹೋರಾಟ, ಸರ್ಕಾರದ ಇಚ್ಛಾಶಕ್ತಿಯಿಂದ ತಾಲ್ಲೂಕು ಆಗಿದ್ದು, ಕಾರಟಗಿ, ಕನಕಗಿರಿ ತಾಲ್ಲೂಕುಗಳು ಮಾದರಿ ತಾಲ್ಲೂಕು ಎಂದನಿಸಿದಾಗ ಎಲ್ಲರ ಶ್ರಮಕ್ಕೂ ಬೆಲೆ ದೊರೆಯುವುದು ಎಂದರು.
ರೈತ ಮುಖಂಡ ಮರಿಯಪ್ಪ ಸಾಲೋಣಿ, ಶ್ರೀಶೈಲಗೌಡ ತಿಮ್ಮನಗೌಡ ಚಳ್ಳೂರು ಮಾತನಾಡಿದರು. ಹೋರಾಟದಲ್ಲಿ ಭಾಗಿಯಾಗಿದ್ದ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.
ಪುರಸಭೆ ಅಧ್ಯಕ್ಷೆ ಭುವನೇಶ್ವರಿ ಶಿವರೆಡ್ಡಿ ನಾಯಕ, ಉಪಾಧ್ಯಕ್ಷೆ ಮಹಾದೇವಿ ಲಕ್ಷ್ಮಣ ಭಜಂತ್ರಿ, ವಿಶೇಷ ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಪ್ರಮುಖರಾದ ಎಸ್. ಬಿ. ರೆಡ್ಡಿ, ನೀಲಕಂಠಪ್ಪ ಸೋಮಲಾಪುರ, ಗಿರಿಜಾಶಂಕರ ಪಾಟೀಲ್, ಲಿಂಗಪ್ಪ ಸುಂಕದ, ವಿರುಪಾಕ್ಷಗೌಡ ಮೈಲಾಪುರ, ಕೆ. ಸಣ್ಣಸೂಗಪ್ಪ, ಷಣ್ಮುಖಪ್ಪ ಕೆಂಡದ, ಎನ್. ಶ್ರೀನಿವಾಸ, ಬಿ. ಶರಣಯ್ಯಸ್ವಾಮಿ, ಜಿ. ನಾಗರಡ್ಡೆಪ್ಪ, ಟಿ. ನೀಲಮ್ಮ ಮಹಾಂತಯ್ಯಸ್ವಾಮಿ, ಬಾಲಪ್ಪ ಹೂಗಾರ, ಅಮರೇಶ ಕುಳಗಿ, ಶಿವಶರಣೇಗೌಡ, ಶರಣೇಗೌಡ ಪೊಲೀಸ್ ಪಾಟೀಲ್, ಪುರಸಭೆ, ಎಪಿಎಂಸಿ ಸದಸ್ಯರು, ಜನಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲ್ಲೂಕು ಹೋರಾಟ ಸಮಿತಿ, ವಿವಿಧ ಸಂಘಟನೆಗಳು, ಸಮಾಜ, ಪುರಸಭೆ ಸಹಿತ ವಿವಿಧ ಇಲಾಖೆಹಾಲಿ, ಮಾಜಿ ಶಾಸಕರಿಗೆ ಸನ್ಮಾನಿಸಿದರು. ಮೆಹಬೂಬ ಕಿಲ್ಲೇದಾರ, ಅಮರೇಶ ಮೈಲಾಪುರ, ಪ್ರಹ್ಲಾದ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.