ADVERTISEMENT

10 ದಿನದಲ್ಲಿ 5743 ಪ್ರಕರಣ ದಾಖಲು

ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ₹10,09,460 ದಂಡ ವಿಧಿಸಿದ ಪೊಲೀಸರು

ಸಿದ್ದನಗೌಡ ಪಾಟೀಲ
Published 21 ಮೇ 2021, 4:17 IST
Last Updated 21 ಮೇ 2021, 4:17 IST
ಕೊಪ್ಪಳದಲ್ಲಿ ಗುರುವಾರ ಲಾಕ್‍ಡೌನ್ ವೇಳೆ ಸಂಚರಿಸುವ ವಾಹನ ಸವಾರರನ್ನು ವಿಚಾರಿಸುತ್ತಿರುವ ಪೊಲೀಸರು
ಕೊಪ್ಪಳದಲ್ಲಿ ಗುರುವಾರ ಲಾಕ್‍ಡೌನ್ ವೇಳೆ ಸಂಚರಿಸುವ ವಾಹನ ಸವಾರರನ್ನು ವಿಚಾರಿಸುತ್ತಿರುವ ಪೊಲೀಸರು   

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸರ್ಕಾರದ ಆದೇಶಕ್ಕೆ ಪೊಲೀಸ್‌ ಇಲಾಖೆ ದಾಖಲೆ ಪ್ರಮಾಣದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಿದೆ.

ಜನರು ಲಾಕ್‌ಡೌನ್‌ ನಿಯಮಾವಳಿಯನ್ನು ಸರಿಯಾಗಿ ಪಾಲಿಸದೇ ಸೋಂಕು ತೀವ್ರವಾಗುತ್ತಿರುವ ಬಗ್ಗೆ ಈಚೆಗೆ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಳವಳ ವ್ಯಕ್ತಪಡಿಸಿ, ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಲ್ಲದೆ ಮೇ 17ರಿಂದ 5 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮೈಕೆಡವಿ ಎದ್ದ ಪೊಲೀಸರು, ರಸ್ತೆ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನ, ಸವಾರರು, ಮಾಸ್ಕ್‌ ಧರಿಸದೇ ಇರುವವರು, ಪರಸ್ಪರ ಅಂತರ ಕಾಪಾಡಿಕೊಳ್ಳದೇ ಇರುವವರನ್ನು ಹಿಡಿದು ಮೇ10 ರಿಂದ 20ರವರೆಗೆ 5,743 ಪ್ರಕರಣ ದಾಖಲಿಸಿ ₹ 10,09,460 ದಂಡ ವಿಧಿಸಿದ್ದಾರೆ.

ADVERTISEMENT

ಅಲ್ಲದೆ ಸೋಂಕಿತರು ಐಸೋಲೇಶನ್‌, ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದ ಪರಿಣಾಮ ಅವರ ಮೇಲೆ ಕರ್ನಾಟಕ ಸೋಂಕು ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ರೆಮ್‌ಡಿಸಿವಿರ್ ಚುಚ್ಚುಮದ್ದು ಪ್ರಕರಣದಲ್ಲಿ ಐವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ ಮುನಿರಾಬಾದ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಹುಲಿಗಿಯಲ್ಲಿಅಂತ್ಯಕ್ರಿಯೆ ಸಂಬಂಧ ಉಂಟಾದ ಗೊಂದಲದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯನ್ನು ಸಂಪರ್ಕಿಸುವ ಅಂತರ ಜಿಲ್ಲೆಯ ಗಡಿಭಾಗದಲ್ಲಿ 12 ಚೆಕ್‌ ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಸಾವಿರಾರು ಪೊಲೀಸ್‌ ಸಿಬ್ಬಂದಿ ಜಿಲ್ಲೆಯಾದ್ಯಂತ ಮಾರ್ಗಸೂಚಿ ಆದೇಶದ ಅನ್ವಯ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೊನಾ ಫ್ರಂಟ್‌ ಲೈನ್‌ ವಾರಿಯರ್ಸ್ ಎಂದು ಗುರುತಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಹೇರಲಾಗಿದ್ದರೂ ನಗರ ಮತ್ತು ಪಟ್ಟಣದ ಒಳಗಿನ ಪ್ರದೇಶಗಳಲ್ಲಿ ಜನರು ಗುಂಪುಗೂಡುವುದು, ಮೈದಾನಗಳಲ್ಲಿ ಆಟ ಆಡುವುದು, ಜಮೀನುಗಳಲ್ಲಿ ಜೂಜಾಟ ನಡೆಸುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಮಾಹಿತಿ ಬಂದ ತಕ್ಷಣ ಜಾಗ ಖಾಲಿ ಮಾಡಿ ಓಡಿದ ಘಟನೆಗಳು ಕೂಡಾ ನಡೆದಿದೆ.

ಜಪ್ತಿಗೊಂಡ ವಾಹನ ಮರಳಿ ಪಡೆಯುವುದು, ದಂಡದ ಮಾಹಿತಿ, ಪ್ರಕರಣಗಳ ಕುರಿತು ಜನರು ವಕೀಲರು ಮತ್ತು ನ್ಯಾಯಾಲಯಕ್ಕೆಎಡತಾಕುತ್ತಿರುವುದು ಕಂಡು ಬಂದಿದೆ. ಅನಗತ್ಯ ಸಂಚಾರ ಮಾಡುವವರನ್ನು ಹಿಡಿದು ದಂಡ ವಿಧಿಸುವುದೇ ಪೊಲೀಸರಿಗೆ ಸವಾಲಿನ ಕೆಲಸವೂ ಆಗಿದೆ. ಪ್ರಮುಖ ವೃತ್ತ, ಮಾರುಕಟ್ಟೆ ಪ್ರದೇಶಕ್ಕೆ ತೆರಳುವ ಎಲ್ಲ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.