ADVERTISEMENT

ಕುವೆಂಪು ದಿವ್ಯ ಸಂದೇಶ ದಾರಿದೀಪ

ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಿತ್ರಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 6:52 IST
Last Updated 30 ಡಿಸೆಂಬರ್ 2022, 6:52 IST

ಕೊಪ್ಪಳ: ‘ರಾಷ್ಟ್ರಕವಿ ಕುವೆಂಪು ಅವರ ಕವನಗಳು ತುಂಬಾ ಅರ್ಥಗರ್ಭಿತವಾಗಿದ್ದು, ಅವರ ದಿವ್ಯ ಸಂದೇಶಗಳು ಎಲ್ಲರಿಗೂ ದಾರಿದೀಪವಾಗಿವೆ‘ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ‘ಜಾತಿ, ಮತ, ಪಂಥ, ದೇಶ, ಭಾಷೆ ಎಲ್ಲವನ್ನೂ ಮೀರಿ ಮೊದಲು ನಾವು ಮಾನವರಾಗಬೇಕು, ವಿಶ್ವ ಮಾನವರಾಗಬೇಕು ಎಂಬ ಸಂದೇಶವನ್ನು ಕುವೆಂಪು ತಮ್ಮ ಜೀವನದುದ್ದಕ್ಕೂ ಮತ್ತು ಸಾಹಿತ್ಯದಲ್ಲಿ ಪ್ರತಿಪಾದನೆ ಮಾಡಿದ್ದಾರೆ. ಈ ಉದ್ದೇಶಕ್ಕಾಗಿ ರಾಷ್ಟ್ರಕವಿ, ಜಗದ ಕವಿ, ಯುಗದ ಕವಿ ಹಾಗೂ ರಸ ಋಷಿ ಹೀಗೆ ಹಲವಾರು ಬಿರುದುಗಳನ್ನು ಗಳಿಸಿದ್ದಾರೆ’ ಎಂದರು.

‘ಪ್ರಕೃತಿ ಅವರಿಗೆ ಅಚ್ಚುಮೆಚ್ಚಿನ ವಿಷಯವಾಗಿದ್ದು, ಅದರ ಬಗ್ಗೆಯೂ ತಮ್ಮ ಕವನಗಳ ಮೂಲಕ ಸಂದೇಶಗಳನ್ನು ಸಾರಿದ್ದಾರೆ. ಹೀಗೆ ಎಲ್ಲಾ ವಿಷಯಗಳಲ್ಲಿಯೂ ಸಹ ಬಹಳಷ್ಟು ಅದ್ಬುತವಾದ ಸಾಹಿತ್ಯ ರಚನೆ ಮಾಡಿದ್ದಾರೆ’ ಎಂದು ನೆನಪಿಸಿಕೊಂಡರು.

ADVERTISEMENT

ಸಾಹಿತಿ ಸಾವಿತ್ರಿ ಮುಜುಮದಾರ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿ ‘ಮಾನವ ಕುಲಕ್ಕೆ ಕುವೆಂಪು ನೀಡಿರುವ ಆದರ್ಶಗಳು ಸಾರ್ವಕಾಲಿಕವಾಗಿವೆ. ಕನ್ನಡಕ್ಕೆ ನಾಡಗೀತೆ ನೀಡುವುದ ಜೊತೆಗೆ ಈ ನಾಡಿಗೆ ರೈತ ಗೀತೆಯನ್ನು ಸಹ ನೀಡಿದ್ದಾರೆ. ಪ್ರಕೃತಿ ಬಗ್ಗೆಯೂ ಅಪಾರ ಕಾಳಜಿ ತೋರಿಸಿದ್ದಾರೆ’ ಎಂದರು.

ಕೊಪ್ಪಳ ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ರೆಡ್ಡೇರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುಂಡಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ನಗರಸಭೆ ಆಯುಕ್ತ ಎಚ್‌.ಎನ್‌. ಭಜಕ್ಕನವರ್, ನಿವೃತ್ತ ಪ್ರಾಚಾರ್ಯ ಸಿಬಿ ಜಡಿಯವರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.