ಕುಷ್ಟಗಿ: ಕೆಲಸದ ಅವಧಿಯಲ್ಲಿಯೇ ಸಿಬ್ಬಂದಿ ನಾಪತ್ತೆಯಾಗಿರುತ್ತಾರೆ. ಮುಖ್ಯಾಧಿಕಾರಿ ಬರುವುದು ವಾರಕ್ಕೊಮ್ಮೆ. ಸರ್ಕಾರದ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು, ಬೇಸತ್ತವರು ಕಚೇರಿಯಲ್ಲಿಯೇ ಹಿಡಿಶಾಪ ಹಾಕಿ ಹೋಗುತ್ತಾರೆ. ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕೆಂಬುದೇ ಹೊಳೆಯುತ್ತಿಲ್ಲ.
ಹೌದು, ಅರಾಜಕತೆ ತಾಂಡವಾಡುತ್ತಿರುವ ಇಲ್ಲಿಯ ಪುರಸಭೆ ಕಚೇರಿ ಕಾರ್ಯವೈಖರಿ ಕುರಿತು ಸ್ಥಳದಲ್ಲಿದ್ದ ಕೃಷ್ಣಮೂರ್ತಿ ಟೆಂಗುಂಟಿ, ನಿಜಾಮುದ್ದೀನ್ ಕಪಾಲಿ ಆಕ್ರೋಶ ಹೊರಹಾಕಿದ್ದು ಹೀಗೆ.
‘ಪುರಸಭೆಯಲ್ಲಿ ಕಾಯಂ ಮುಖ್ಯಾಧಿಕಾರಿ ಇಲ್ಲದ ಕಾರಣ ಸಿಬ್ಬಂದಿ ಒಂದು ತಾಸು ಸಹ ಕುಳಿತು ಕೆಲಸ ಮಾಡುವುದಿಲ್ಲ’ ಎಂಬ ಬೇಸರ ವೀರಭದ್ರಗೌಡ, ಸಂಗಪ್ಪ ಕಿರಗಿ ಅವರದು. ‘ಸಿಬ್ಬಂದಿ ಮನೆ ಕರ ಬಾಕಿ ವಸೂಲಿಗೆ ಹೋಗಿದ್ದಾರೆ’ ಎಂದು ಅಧ್ಯಕ್ಷ ಮಹಾಂತೇಶ ಹೇಳಿದರಾದರೂ ಸಿಬ್ಬಂದಿ ಕಚೇರಿ ಸುತ್ತ ತಿರುಗಾಡುತ್ತಿದ್ದುದು ಕಂಡುಬಂದಿತು.
ಶುಕ್ರವಾರ ಬೆಳಿಗ್ಗೆ 11.10ರ ಸಮಯ ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿದಾಗ ಪುರಸಭೆಯ ಕಂದಾಯ ವಿಭಾಗ, ಆವಕಜಾವಕ, ನೈರ್ಮಲ್ಯ ಹೀಗೆ ವಿವಿಧ ಶಾಖೆಗಳ ಕುರ್ಚಿಗಳೆಲ್ಲ ಖಾಲಿ ಇದ್ದುದು, ತಮ್ಮ ಕೆಲಸಗಳಿಗೆ ಬರುವ ಸಾರ್ವಜನಿಕರು ಸಿಬ್ಬಂದಿ ಇಲ್ಲದ್ದಕ್ಕೆ ಗೊಣಗುತ್ತ ಹೋಗುವುದು ಸಾಮಾನ್ಯವಾಗಿತ್ತು. ಸಿಬ್ಬಂದಿ ಇರಲಿ ಬಿಡಲಿ ನಿತ್ಯ ತಮ್ಮ ಚೇಂಬರ್‌ದಲ್ಲಿ ಅಧ್ಯಕ್ಷ ಮಹಾಂತೇಶ ಕಲಭಾವಿ ಮಾತ್ರ ಸಿಗುತ್ತಾರೆ. ಆದರೆ ಅಧಿಕಾರಿಯೇ ಇಲ್ಲದ್ದಕ್ಕೆ ಅವರೂ ಅಸಹಾಯಕರು. ಬಂದ ಜನರಿಗೆ ಉತ್ತರ ಹೇಳಿ ಕಳಿಸುವುದೇ ಅವರ ಕೆಲಸವಾಗಿತ್ತು. ಕೆಲ ಪ್ರಭಾವಿ ಸದಸ್ಯರಂತೂ ತಮ್ಮ ಕೆಲಸವಾದರೆ ಸಾಕು ಜನರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮತ್ತು ಮಧ್ಯವರ್ತಿಗಳು, ಸದಸ್ಯರ ಸಂಬಂಧಿಕರು ಸದಾ ಠಿಕಾಣಿ ಹೂಡಿ ಕಚೇರಿಯಲ್ಲಿನ ದಾಖಲೆಗಳನ್ನು ತಡಕಾಡುತ್ತಿರುತ್ತಾರೆ ಎಂಬ ಆರೋಪವೂ ಕೇಳಿಬಂದಿತು.
ಏಕೀ ಸಮಸ್ಯೆ: ಕೆಲ ತಿಂಗಳಿಂದ ಪುರಸಭೆ ಮುಖ್ಯಾಧಿಕಾರಿ ಹುದ್ದೆ ಖಾಲಿ ಇದ್ದು ಸದ್ಯ ಕಾರಟಗಿ ಪುರಸಭೆಯಲ್ಲಿ ಮುಖ್ಯಾಧಿಕಾರಿ ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿಯಾಗಿ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದಾರೆ. ವಾರದಲ್ಲಿ ಎರಡು ದಿನ ಇಲ್ಲಿಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಅಲ್ಲಿಯ ಕೆಲಸದ ಒತ್ತಡದ ಕಾರಣಕ್ಕೆ ಕೆಲವೊಮ್ಮೆ ವಾರ ಕಳೆದರೂ ಇಲ್ಲಿಗೆ ಬರುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಸಿಬ್ಬಂದಿ ಮೇಲೆ ಯಾರ ಹಿಡಿತವೂ ಇಲ್ಲ. ಹಾಗಾಗಿ ಪುರಸಭೆಗೆ ಸೇರಿದ ಎಲ್ಲ ಕೆಲಸಕಾರ್ಯಗಳೂ ಅಸ್ತವ್ಯಸ್ತಗೊಂಡಿವೆ ಎಂಬ ದೂರು ಕೇಳಿಬಂದಿತು.
ಪುರಸಭೆ ಸಿಬ್ಬಂದಿ ಯಾರ ಮಾತೂ ಕೇಳುವ ಸ್ಥಿತಿಯಲ್ಲಿಲ್ಲ. ಇಷ್ಟಾದರೂ ಜಿಲ್ಲಾ ಅಭಿವೃದ್ಧಿಕೋಶದ ಅಧಿಕಾರಿ ಸಿಬ್ಬಂದಿ ಒಬ್ಬರೂ ಇಲ್ಲಿಗೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ.– ಕೃಷ್ಣಮೂರ್ತಿ ಟೆಂಗುಂಟಿ, ಕನ್ನಡಪರ ಸಂಘಟನೆ ಅಧ್ಯಕ್ಷ
ಕಾಯಂ ಮುಖ್ಯಾಧಿಕಾರಿ ಇಲ್ಲದ ಕಾರಣ ಕೆಲಸಕಾರ್ಯಗಳಿಗೆ ವ್ಯತ್ಯಯವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಅಲ್ಲದೆ ಕಾಯಂ ಮುಖ್ಯಾಧಿಕಾರಿ ಬರುವ ಸಾಧ್ಯತೆ ಇದ್ದು ಸಮಸ್ಯೆಗೆ ಪರಿಹಾರ ದೊರೆಯಲಿದೆ.– ಮಹಾಂತೇಶ ಕಲಭಾವಿ, ಪುರಸಭೆ ಅಧ್ಯಕ್ಷ
ಕೈಸೇರದ ‘ಬಿ ಖಾತಾ’ ದಾಖಲೆ
‘ಬಿ.ಖಾತಾ ದಾಖಲೆ ಪಡೆಯುವುದು ಜನರಿಗೆ ಒಂದು ರೀತಿಯಲ್ಲಿ ಸವಾಲಿನ ಕೆಲಸವಾಗಿದೆ. ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳಿನಿಂದ ಎಡತಾಕುತ್ತಿದ್ದರೂ ದಾಖಲೆ (ಉತಾರ) ಕೈಸೇರುವುದಿಲ್ಲ. ಇಲ್ಲಿ ಕಾಯಂ ಗಿರಾಕಿಗಳಾಗಿರುವ ಮಧ್ಯವರ್ತಿಗಳ ಮೂಲಕ ಕೈ ಬಿಸಿ ಮಾಡಿದರೆ ಕೆಲದಿನಗಳಲ್ಲೇ ದೊರೆಯುತ್ತದೆ. ಕೆಲ ಸದಸ್ಯರೇ ಇಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದು ಸಾರ್ವಜನಿಕರ ಗೋಳು ಹೇಳತೀರದಷ್ಟಾಗಿದೆ’ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಕೆಲ ಜನರು ಪುರಸಭೆ ಕಚೇರಿ ಬಳಿ ಅತೃಪ್ತಿ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಿಬ್ಬಂದಿಯೊಬ್ಬರು ‘ಋಣಭಾರ (ಇಸಿ) ದಾಖಲೆ ಸಮರ್ಪಕವಾಗಿರುವುದಿಲ್ಲ. ಇಸಿ ಸಂಖ್ಯೆ ನಮೂದಾಗಿರುವುದಿಲ್ಲ. ಇಂಥ ಕೆಲ ತಾಂತ್ರಿಕ ಕಾರಣ ಹೇಳಿದರೆ ಜನರು ತಿಳಿದುಕೊಳ್ಳುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.