ADVERTISEMENT

ಕೊಪ್ಪಳ: ಕುಷ್ಟಗಿ ಯೋಗ ಸಮಿತಿಗೆ ದಶಕದ ಸಂಭ್ರಮ

ಆರೋಗ್ಯಪೂರ್ಣ ಸಮಾಜದ ಪರಿಕಲ್ಪನೆಯ ಸೇವೆ

ನಾರಾಯಣರಾವ ಕುಲಕರ್ಣಿ
Published 21 ಜೂನ್ 2022, 4:34 IST
Last Updated 21 ಜೂನ್ 2022, 4:34 IST
ಕುಷ್ಟಗಿಯಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಯೋಗಪಾಠ
ಕುಷ್ಟಗಿಯಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಯೋಗಪಾಠ   

ಕುಷ್ಟಗಿ: ಕಳೆದ ಒಂದು ದಶಕದಿಂದಲೂ ಕಾರ್ಯನಿರ್ವಹಿಸುತ್ತಿರುವ ಇಲ್ಲಿಯ ಪತಂಜಲಿ ಯೋಗ ಸಮಿತಿ ಸಾರ್ವಜನಿಕರಲ್ಲಿ ಯೋಗದ ಮಹತ್ವ ಕುರಿತು ಸಮಾಜದಲ್ಲಿ ಆರೋಗ್ಯದ ಅರಿವು ಮೂಡಿಸುತ್ತಿದೆ.

ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಶಾಲೆ, ಕಾಲೇಜುಗಳು, ಹಾಸ್ಟೆಲ್‌, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರ ಸಹಕಾರದೊಂದಿಗೆ ನಿರಂತರವಾಗಿ ಪ್ರತಿ ವರ್ಷ ಎರಡು ಶಿಬಿರಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಜನರನ್ನು ಯೋಗಾಭ್ಯಾಸದಲ್ಲಿ ತೊಡಗುವಂತೆ ಮಾಡಿದೆ. ಅಂತರರಾಷ್ಟ್ರೀಯ ಯೋಗ ದಿನ ಘೋಷಣೆಗೆ ಮೊದಲೇ ಈ ಭಾಗದಲ್ಲಿ 2012 ರಿಂದ ಯೋಗ ಶಿಬಿರ ನಡೆಸುತ್ತ ಬಂದಿದೆ.

ಅದೇ ರೀತಿ ಶಿಕ್ಷಕರಿಗೂ ಯೋಗ ತರಬೇತಿ ಶಿಬಿರ ಆಯೋಜಿಸುವ ಮೂಲಕ ಯೋಗ ಶಿಕ್ಷಕ ಪಟುಗಳನ್ನು ತಯಾರು ಮಾಡಿದ್ದು, ಈ ರೀತಿ ತರಬೇತಿ ಪಡೆದವರು ಕೊಪ್ಪಳ ಜಿಲ್ಲೆಯ ಅನೇಕ ಹಳ್ಳಿ ಪಟ್ಟಣಗಳಿಗೆ ಹೋಗಿ ಯೋಗ ಶಿಕ್ಷಣ ನೀಡುತ್ತಿರುವುದು, ಜೊತೆಗೆ ತರಬೇತಿ ಪಡೆದ ಯೋಗಶಿಕ್ಷಕರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕ ಹೊಂದಿರುವುದು ಸಮಿತಿಯ ಹೆಮ್ಮೆಯ ಸಂಗತಿಗಳಲ್ಲಿ ಒಂದು ಎನ್ನುತ್ತಾರೆ ಪತಂಜಲಿ ಯೋಗ ಸಮಿತಿ ಐದು ಸಮಿತಿಗಳ ಪೈಕಿ ಭಾರತ ಸ್ವಾಭಿಮಾನ ಟ್ರಸ್ಟ್‌ ಜಿಲ್ಲಾ ಪ್ರಭಾರಿಯಾಗಿರುವ ವೀರೇಶ ಬಂಗಾರಶೆಟ್ಟರ.

ADVERTISEMENT

ಉಳಿದಂತೆ ಮಹಿಳಾ ಸಮಿತಿ, ಯುವ ಸಮಿತಿ, ಕಿಸಾನ್‌ ಸಮಿತಿ, ಯೋಗ ಸಮಿತಿ ಹೀಗೆ ಐದು ವಿಭಾಗಗಳಿದ್ದು ಯೋಗ ಅಷ್ಟೇ ಅಲ್ಲ, ಆರೋಗ್ಯ, ರಕ್ತದಾನ ಶಿಬಿರ, ಪರಿಸರ ಜಾಗೃತಿಯಂಥ ಸಾಮಾಜಿಕ ಕೆಲಸ ಕಾರ್ಯಗಳಲ್ಲಿಯೂ ತೊಡಗಿರುವುದು ಮತ್ತೊಂದು ವಿಶೇಷ. ಪತಂಜಲಿ ಮತ್ತು ಭಾರತ್ ಸ್ವಾಭಿಮಾನಿ ಟ್ರಸ್ಟ್‌ಗಳು ಈ ಭಾಗದಲ್ಲಿ ಯೋಗದ ಗಾಳಿ ಹರಡಿಸುವ ಮೂಲಕ ಸಾಮಾಜಿಕ ಕಳಕಳಿ ಮರೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.