
ಕೊಪ್ಪಳ: ಗವಿಮಠದ ಜಾತ್ರೆಯ ಮಹಾರಥೋತ್ಸವ ಮುಗಿದು ನಾಲ್ಕು ದಿನಗಳು ಕಳೆದರೂ ಈಗಲೂ ನಿರಂತರವಾಗಿ ಮಠಕ್ಕೆ ಭಕ್ತರಿಂದ ದಾಸೋಹದ ಮಹಾಪೂರವೇ ಹರಿದು ಬರುತ್ತಿದೆ.
ಜಾತ್ರೆ ಆರಂಭವಾಗುವುದಕ್ಕಿಂದಲೂ ಒಂದು ತಿಂಗಳು ಮೊದಲಿನಿಂದಲೂ ಧವಸ, ಧಾನ್ಯ, ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ರವೆ ಉಂಡಿ, ಸಿಹಿ ಬೂಂದಿ ಹೀಗೆ ಅನೇಕ ತಿನಿಸುಗಳನ್ನು ಭಕ್ತರು ನೀಡುವುದು ಸಾಮಾನ್ಯ. ಈಗ ರಥೋತ್ಸವದ ಬಳಿಕವೂ ಜಿಲ್ಲೆ ಹಾಗೂ ಹೊರಜಿಲ್ಲೆಗಳ ಭಕ್ತರು ಮಠಕ್ಕೆ ದಾಸೋಹದ ತಿನಿಸುಗಳನ್ನು ತಂದು ಅರ್ಪಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಜಂಭುನಾಥನ ಹಳ್ಳಿ ಹಾಗೂ ಹನುಮಾಪುರ ಸುತ್ತಲಿನ ಗ್ರಾಮಸ್ಥರು ಐದು ಸಾವಿರ ಜೋಳದ ರೊಟ್ಟಿ, 21 ಕ್ವಿಂಟಲ್ ಸಿಹಿಬೂಂದಿ ನೀಡಿದರು. ಹಾಗೆಯೇ ಗಂಗಾವತಿ ತಾಲ್ಲೂಕಿನ ಸಾಣಾಫುರದಿಂದಲೂ ಒಂದು ಕ್ವಿಂಟಲ್ ಬೂಂದಿ ನೀಡಲಾಗಿದೆ. ಭಕ್ತರು ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಧಾನ್ಯ ನೀಡುತ್ತಿದ್ದಾರೆ.
ಅಳಂವಡಿ ವರದಿ: ಜಾತ್ರಾ ಮಹೋತ್ಸವದ ಅಂಗವಾಗಿ ಜ. 18ರ ತನಕ ನಡೆಯಲಿರುವ ಮಹಾದಾಸೋಹಕ್ಕೆ ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮಸ್ಥರು ಮೂರೂವರೆ ಕ್ವಿಂಟಲ್ ಕರದಂಟು ತಯಾರಿಸಿ ಗವಿಮಠಕ್ಕೆ ಸಮರ್ಪಿಸಿದ್ದಾರೆ. ಗ್ರಾಮಸ್ಥರು 2 ಕ್ವಿಂಟಕ್ ಸಕ್ಕರೆ, 1 ಕ್ವಿಂಟಲ್ ಕಡ್ಲೇಬೇಳೆ ಹಿಟ್ಟು, 15 ಕೆ.ಜಿ ಗೊಡಂಬಿ, 15 ಕೆ.ಜಿ ಬಾದಾಮಿ, 15 ಕೆ.ಜಿ ಕೊಬ್ಬರಿಪುಡಿ ಬಳಸಿ ಕರದಂಟು ತಯಾರಿಸಿದ್ದಾರೆ. ಈಗಾಗಲೇ ಸುಮಾರು 3 ರಿಂದ 4 ಕ್ವಿಂಟಲ್ ಮಾದಲಿ ಮಠಕ್ಕೆ ನೀಡಿದ್ದಾರೆ. ಮತ್ತೆ ಈಗ ಸುಮಾರು 6000 ರೊಟ್ಟಿ ಹಾಗೂ ಕರದಂಟು ಶುಕ್ರವಾರ ಅರ್ಪಿಸಿದರು.
'ಪ್ರತಿವರ್ಷವೂ ನಮ್ಮ ಗ್ರಾಮದಿಂದ ಜಾತ್ರೆಗೆ ಆಗಮಿಸುವ ಭಕ್ತರಿಗೆ ದವಸ, ಧಾನ್ಯ ರೊಟ್ಟಿ ಸಮರ್ಪಿಸುತ್ತಿದ್ದೇವೆ. ಈ ವರ್ಷ ಕರದಂಟು, ರೊಟ್ಟಿ ಹಾಗೂ ಮಾದಲಿಯನ್ನು ಮಠಕ್ಕೆ ನೀಡಿದ್ದೇವೆ’ ಎಂದು ಬೆಟಗೇರಿ ಗ್ರಾಮಸ್ಥರು ತಿಳಿಸಿದರು.
ವಿದೇಶಿ ಪ್ರಜೆಗಳು: ಮಹಾರಥೋತ್ಸವದ ಬಳಿಕ ಅಮೆರಿಕದಲ್ಲಿ ನೆಲೆಸಿದ್ದ ಭಾರತದ ಪ್ರಜೆಗಳು ಜಾತ್ರೆಗೆ ಭೇಟಿ ನೀಡಿದ್ದರು. ಗುರುವಾರ ಇಸ್ರೇಲ್ ದಂಪತಿ ಭೇಟಿ ನೀಡಿ ಜಾತ್ರೆಯ ಸೊಬಗು ಸವಿದರು. ಅನೇಕ ದೇಶಗಳ ಪ್ರವಾಸಿಗರು ವಿಶ್ವವಿಖ್ಯಾತ ಹಂಪಿ, ಸಾಣಾಪುರ, ಆನೆಗೊಂದಿ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅಲ್ಲಿಗೆ ಬಂದಿದ್ದ ಪ್ರವಾಸಿಗರು ಜಾತ್ರೆಗೂ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.