ADVERTISEMENT

ಹಡಪದ ಅಪ್ಪಣ್ಣ ಸಾರ್ವಕಾಲಕ್ಕೂ ಸ್ಮರಣೀಯ- ನಿವೃತ್ತ ಬಿಇಒ ಎಚ್‌.ಜಿ.ಹಂಪಣ್ಣವರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 13:05 IST
Last Updated 4 ಜನವರಿ 2022, 13:05 IST
ಕುಷ್ಟಗಿಯ ಬಸವ ಭವನದಲ್ಲಿ ನಡೆದ ವಚನ ಚಿಂತನ ಕಾರ್ಯಕ್ರಮದಲ್ಲಿ ನಿವೃತ್ತ ಬಿಇಒ ಎಚ್. ಜಿ.ಹಂಪಣ್ಣನವರನ್ನು ಗೌರವಿಸಲಾಯಿತು.
ಕುಷ್ಟಗಿಯ ಬಸವ ಭವನದಲ್ಲಿ ನಡೆದ ವಚನ ಚಿಂತನ ಕಾರ್ಯಕ್ರಮದಲ್ಲಿ ನಿವೃತ್ತ ಬಿಇಒ ಎಚ್. ಜಿ.ಹಂಪಣ್ಣನವರನ್ನು ಗೌರವಿಸಲಾಯಿತು.   

ಕುಷ್ಟಗಿ: ‘ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪಕ್ಕೆ ಆಧಾರ ಸ್ಥಂಬವಾಗಿದ್ದ ಹಡಪದ ಅಪ್ಪಣ್ಣನವರ ವಚನಗಳು, ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಸಮಾಜದ ಎಲ್ಲ ಸಮುದಾಯಗಳಿಗೂ ಸ್ಫೂರ್ತಿಯಾಗಿವೆ’ ಎಂದು ಸಿಂಧನೂರಿನ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಜಿ.ಹಂಪಣ್ಣನವರ ಹೇಳಿದರು.

ಇಲ್ಲಿಯ ಬಸವ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಚನ ಚಿಂತನ ಕಾರ್ಯಕ್ರಮದಲ್ಲಿ 'ಶರಣ ಹಡಪದ ಅಪ್ಪಣ್ಣನವರ ಬದುಕು ಹಾಗೂ ವಚನ ಸಾಹಿತ್ಯ' ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕೆಲ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸಿದರು. ಅವರ ವಚನಗಳು ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಹಡಪದ ಅಪ್ಪಣ್ಣ ಅವರು ಸದಾ ಸ್ಮರಣೀಯ ಮತ್ತು 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್‌ ಪುರುಷ ಎಂದರು.

ADVERTISEMENT

ಕೆಳವರ್ಗದ ವಚನಕಾರರಾಗಿದ್ದ ಹಡಪದ ಅಪ್ಪಣ್ಣನವರು ತಮ್ಮಯ ಶ್ರೇಷ್ಠ ಆಚಾರ ವಿಚಾರಗಳಿಂದ ಜನ ಸಾಮಾನ್ಯರಿಗೂ ಜೀವನದ ಅರ್ಥ ತಿಳಿಯುವಂತೆ ಮಾಡಿದ್ದಾರೆ. ಬಸವಪ್ರೀಯ ಕೂಡಲ ಚೆನ್ನಬಸವಣ್ಣರೆಂಬ ಅಂಕಿತ ನಾಮದಿಂದ ಸುಮಾರು 201ಕ್ಕೂ ಹೆಚ್ಚು ವಚನಗಳನ್ನು ವಿಶಿಷ್ಠ ಕಥನ ಶೈಲಿಯ ಹಾಗೂ ಬೆಡಗಿನ ವಚನಗಳನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಬಸವಾದಿ ಶರಣರು ತಮ್ಮ ವಚನಗಳಲ್ಲಿ ಅಪ್ಪಣ್ಣನವರನ್ನು ಸ್ಮರಿಸಿಕೊಂಡಿರುವದು ಇತಿಹಾಸವಾಗಿದೆ. ಆದರೆ ಬದಲಾದ ಕಾಲಘಟ್ಟದಲ್ಲಿಯೂ ಹಡಪದ ಅಪ್ಪಣ್ಣನ ಸಮಾಜವನ್ನು ನಿರ್ಲಕ್ಷಿಸುತ್ತಿರುವುದು ಸಮಸಮಾಜದ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ ಎಂದು ವಿಷಾದಿಸಿದರು.

ಎಚ್‌.ಜಿ.ಹಂಪಣ್ಣ ಅವರನ್ನು ಬಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಬಸವ ಸಮಿತಿಯ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಮುಖರಾದ ಮಾಜಿ ಶಾಸಕ ಕೆ.ಶರಣಪ್ಪ, ಶಿವಸಂಗಪ್ಪ ಬಿಜಕಲ್, ಶರಣಬಸಪ್ಪ ಸುಂಕದ, ನೂರಂದಪ್ಪ ಕಂದಕೂರ, ಎಚ್‌.ಪುತ್ರಪ್ಪ, ವಕೀಲ ಉಮೇಂದ್ರ ಮಾರನಾಳ, ಮಲ್ಲಪ್ಪ ಹೊರಪೇಟಿ, ಶಿವಾಜಿ ಹಡಪದ, ರಾಮನಗೌಡ ಪಾಟೀಲ, ಸಮುದಾಯ ಸಂಘಟನೆ ಅಧ್ಯಕ್ಷ ನಬಿಸಾಬ ಕುಷ್ಟಗಿ, ಎ.ವೈ.ಲೋಕರೆ ಇತರರು ಇದ್ದರು. ಬಸವ ಸಮಿತಿ ಕಾರ್ಯದರ್ಶಿ ಎಚ್‌.ಜಿ.ಮಹೇಶ್ ನಿರೂಪಿಸಿದರು. ಸಿಂಧು ಹೊಸಗೌಡರ ವಚನ ಮಂಗಲ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.