ADVERTISEMENT

ತಾವರಗೇರಾ: ನಿರ್ಗತಿಕರಿಗೆ ನಿತ್ಯ ಊಟ ನೀಡುವ ರಫೀಕ್

​ಪ್ರಜಾವಾಣಿ ವಾರ್ತೆ
Published 7 ಮೇ 2021, 5:08 IST
Last Updated 7 ಮೇ 2021, 5:08 IST
ತಾವರಗೇರಾ ಪಟ್ಟಣದಲ್ಲಿ ನಿರ್ಗತಿಕರಿಗೆ ಯುವಕ ಎಂ.ಡಿ.ರಫೀಕ್ ಉಚಿತವಾಗಿ ಊಟ ನೀಡುತ್ತಿರುವುದು
ತಾವರಗೇರಾ ಪಟ್ಟಣದಲ್ಲಿ ನಿರ್ಗತಿಕರಿಗೆ ಯುವಕ ಎಂ.ಡಿ.ರಫೀಕ್ ಉಚಿತವಾಗಿ ಊಟ ನೀಡುತ್ತಿರುವುದು   

ತಾವರಗೇರಾ: ಲಾಕ್‌ಡೌನ್ ಸಮಯದಲ್ಲಿ ಒಂದೊತ್ತು ಊಟಕ್ಕಾಗಿ ಪಟ್ಟಣದ ವಿವಿಧ ಬೀದಿಗಳಲ್ಲಿ ಪರದಾಡುವ ಅದೆಷ್ಟೋ ಜನ ನಿರ್ಗತಿಕರಿಗೆ ಪಟ್ಟಣದ ಮುಸ್ಲಿಂ ಸಮಾಜದ ಯುವಕ ಎಂ.ಡಿ.ರಫೀಕ್ ಪ್ರತಿ ದಿನ ಎರಡು ಹೊತ್ತು ಊಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಯ ಅಕ್ಕಪಕ್ಕದಲ್ಲಿ, ದರ್ಗಾದಲ್ಲಿ, ಗುಡಿ ಗುಂಡಾರಗಳಲ್ಲಿ ನಿರ್ಗತಿಕರು, ಭಿಕ್ಷುಕರು, ರೋಗಿಗಳು ಉಪವಾಸದಿಂದ ಜೀವ ಕಳೆಯುತ್ತಿರುತ್ತಾರೆ. ಅಂತವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದು ಅವರು ಇರುವ ಸ್ಥಳಕ್ಕೆ ಪ್ರತಿ ದಿನ ತಾವೇ ಹೋಗಿ ಎರಡು ಹೊತ್ತು ಊಟ ನೀಡುತ್ತಿದ್ದಾರೆ.

ಮಾಸ್ಕ್ ಹಾಕಿಕೊಂಡು ಸುರಕ್ಷಿತ ಅಂತರದೊಂದಿಗೆ ಊಟವನ್ನು ಉಚಿತವಾಗಿ ನೀಡುತ್ತಿದ್ದಾರೆ. ಸಣ್ಣ ಅಂಗಡಿಯ ವ್ಯವಹಾರದ ಮೂಲಕ ಜೀವನ ನಡೆಸುವ ಈ ರಫೀಕ್ ಲಾಕ್‌ಡೌನ್‌ ಸಮಯದಲ್ಲಿ ನಿರ್ಗತಿಕರ ಪಾಲಿಗೆ ಅನ್ನದಾತನಾಗಿದ್ದಾರೆ.

ADVERTISEMENT

ಎಲ್ಲೆಲ್ಲಿ? ಯಾರಿಗೆ ಊಟ: ಪಟ್ಣಣದ ಪ್ರಮುಖ ರಸ್ತೆಯ ಅಕ್ಕ-ಪಕ್ಕದಲ್ಲಿ, ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಮೇನ್ ಬಜಾರ್, ದರ್ಗಾ, ಗುಡಿ-ಗುಂಡಾರ ಸೇರಿದಂತೆ ನಾನಾ ಕಡೆ ಇರುವ ನಿರ್ಗತಿಕರು, ಭಿಕ್ಷುಕರು, ವೃದ್ಧರು, ರೋಗಿಗಳು ಸೇರಿದಂತೆ 15-20 ಜನರಿಗೆ ಪ್ರತಿ ದಿನ ಎರಡು ಹೊತ್ತು ಊಟ ನೀಡುತ್ತಾರೆ. ಅನ್ನ ಸಾಂಬರ್, ಚಿತ್ರಾನ್ನ, ಪಲಾವ್, ಬಿಸಿ ಬೇಳೆ ಬಾತ್ ನೀಡುತ್ತಾರೆ.

‘ಕಳೆದ ವರ್ಷ 40 ದಿನ ₹35 ರಿಂದ ₹40 ಸಾವಿರ ಹಣ ಖರ್ಚು ಮಾಡಿ ನಿರ್ಗತಿಕರು, ಬಡವರಿಗೆ ಊಟದ ವ್ಯವಸ್ಥೆ ಮಾಡಿದ್ದೆ. ಈಗ ಮೂರು ದಿನದಿಂದ ಪ್ರತಿ ನಿತ್ಯ ₹500 ₹600 ಖರ್ಚು ಮಾಡಿ ಊಟ ನೀಡುತ್ತಿದ್ದೇನೆ. ಈ ಸೇವೆ ನನಗೆ ತೃಪ್ತಿ ತಂದಿದೆ. ಕುಟುಂಬದವರ ಸಹಕಾರವಿದೆ ಎನ್ನುತ್ತಾರೆ ಯುವಕ ಎಂ.ಡಿ.ರಫೀಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.