ಪ್ರಾತಿನಿಧಿಕ ಚಿತ್ರ
ಕೊಪ್ಪಳ: ತಾಲ್ಲೂಕಿನ ಚಳ್ಳಾರಿ ಗ್ರಾಮದಲ್ಲಿ ಮೂರು ಹೆಣ್ಣುಮಕ್ಕಳನ್ನು ಹೆತ್ತ ಕಾರಣಕ್ಕಾಗಿ ಪತಿ ನಿಂದಿಸಿದ್ದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಚಳ್ಳಾರಿಯ ಗಣೇಶ ಗುಮಗೇರಿ ಹಾಗೂ ಹನುಮವ್ವ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಕೆಲ ತಿಂಗಳ ಹಿಂದೆ ಮೂರನೇ ಮಗು ಜನಿಸಿದೆ. ಈ ಬಾರಿಯೂ ಹೆಣ್ಣುಮಗು ಆಗಿದೆ ಎಂದು ದಂಪತಿ ನಡುವೆ ಮೇಲಿಂದ ಮೇಲೆ ಗಲಾಟೆಯಾಗುತ್ತಿತ್ತು.
‘ಮೂರನೇ ಮಗು ಹೆಣ್ಣಾದ ನಂತರ ಅಳಿಯ ಗಣೇಶ ನನ್ನ ಮಗಳಿಗೆ ವಿಪರೀತವಾಗಿ ಕಾಟ ಕೊಟ್ಟಿದ್ದಾನೆ. ಮದ್ಯ ವ್ಯಸನಿಯೂ ಆಗಿದ್ದರಿಂದ ಹೊಡೆದು ಮೂರು ಹೆಣ್ಣು ಹೆತ್ತಿದ್ದೀಯಾ ಎಂದು ನಿಂದಿಸಿದ್ದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಹನುಮವ್ವ ಅವರ ತಂದೆ ಬಸಪ್ಪ ಕೋರಿ ನೀಡಿದ ದೂರಿನ ಅನ್ವಯ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಹನುಮವ್ವ ಸಾವಿಗೆ ಮೂರು ಹೆಣ್ಣುಮಗು ಎನ್ನುವುದು ಒಂದು ನೆಪವಷ್ಟೇ. ಗಣೇಶ ಮದ್ಯ ವ್ಯಸನಿಯಾಗಿದ್ದರಿಂದ ಪದೇ ಪದೇ ಆ ದಂಪತಿ ನಡುವೆ ಜಗಳವಾಗುತ್ತಿತ್ತು. ಆತನನ್ನ ಬಂಧಿಸಿದ್ದು, ಇನ್ನಿಬ್ಬರ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.