ADVERTISEMENT

MGNREGA: ನರೇಗಾ ಕಾಮಗಾರಿಯಲ್ಲಿ ಮಹಿಳೆಯರ ಮೇಲುಗೈ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 7:23 IST
Last Updated 13 ಮಾರ್ಚ್ 2025, 7:23 IST
ಕುಕನೂರು ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು
ಕುಕನೂರು ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು   

ಕುಕನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಇರುತ್ತಿತ್ತು. ಆದರೆ ಈ ವರ್ಷ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ, ಸಿಬ್ಬಂದಿಯ ಜಾಗೃತಿ ಪರಿಣಾಮ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪಾಲ್ಗೊಂಡು ಹೊಸ ದಾಖಲೆ ಬರೆದಿದೆ.

ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ತಾಲ್ಲೂಕು ಪಂಚಾಯಿತಿ ಮಹತ್ವದ ಹೆಜ್ಜೆಯಿಟ್ಟಿದೆ. ಸಾಮೂಹಿಕ ಕಾಮಗಾರಿಗಳಲ್ಲಿ ಮಹಿಳಾ ಕೂಲಿಕಾರರು ಪುರುಷ ಕೂಲಿಕಾರರಿಗಿಂತ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸಿ ಶೇ 53.45ರಷ್ಟು ಸಾಧನೆ ಮಾಡಿದ್ದಾರೆ.

2024-25 ನೇ ಸಾಲಿನಲ್ಲಿ ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 4,10,000 ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿತ್ತು. ಈ ಗುರಿಗೆ ಅನುಗುಣವಾಗಿ ಪ್ರಸ್ತುತ ಹೆಚ್ಚಿನ ಪ್ರಮಾಣದಲ್ಲಿ ಒಟ್ಟು 4,54,555 ಮಾನವ ದಿನಗಳ ಕೆಲಸಗಳನ್ನು ಮಾಡಲಾಗಿದೆ. ಈ ಪೈಕಿ 2,42,974 ಮಾನವ ದಿನಗಳಲ್ಲಿ ಮಹಿಳಾ ಕೂಲಿಕಾರರು ಕೆಲಸ ಮಾಡಿದ್ದಾರೆ.

ADVERTISEMENT

ತಾಲ್ಲೂಕಿನ ನರೇಗಾ ಕೆಲಸದಲ್ಲಿ ಕೂಲಿಕಾರರ ಭಾಗವಹಿಸುವಿಕೆಯಲ್ಲಿ ಶೇ53.45 ರಷ್ಟು ಮಹಿಳೆಯರಿದ್ದಾರೆ. ಈ ಮೂಲಕ ಪುರುಷ ಕೂಲಿಕಾರರಿಗಿಂತ ನರೇಗಾ ಕೆಲಸದಲ್ಲಿ ನಾವೇನು ಕಡಿಮೆಯೇನಿಲ್ಲ ಎಂಬುದಕ್ಕೆ ಮಹಿಳಾ ಸಬಲೀಕರಣಕ್ಕೆ ಕೈಗನ್ನಡಿ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ನರೇಗಾ ಕಾಮಗಾರಿಯಲ್ಲಿ ಪುರುಷರಿಗೆ ಸರಿಸಮಾನವಾಗಿ ₹349 ಸಂಬಳ ಕೊಡಲಾಗುತ್ತಿದೆ.

ನರೇಗಾ ಕಾಮಗಾರಿ ಮಾನವ ದಿನಗಳ ಸೃಜನೆಯಲ್ಲಿ ಮಹಿಳೆಯರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದು, 2021-22ನೇ ಸಾಲಿನಲ್ಲಿ 47.98 ರಷ್ಟಿತ್ತು. 2022-23 ನೇ ಸಾಲಿನಲ್ಲಿ 52.28 ರಷ್ಟಿದ್ದರೆ, 2023-24 ರಲ್ಲಿ 53.22 ರಷ್ಟಿತ್ತು. ಪ್ರಸ್ತುತ 2024-25 ರ ತಾಲ್ಲೂಕಿನ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ.53.45 ರಷ್ಟಾಗಿದೆ.

ಈ ವರ್ಷ ಶೇ 60ರಷ್ಟು ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಗುರಿ ಹೊಂದಲಾಗಿತ್ತು. 13 ಪಂಚಾಯಿತಿಗಳು ಶೇ 50ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ.
–ಸಂತೋಷ್ ಬಿರಾದಾರ್, ತಾಲ್ಲೂಕು ಪಂಚಾಯಿತಿ ಇಒ ಕುಕುನೂರು
ಮಹಿಳಾ ಕೂಲಿಕಾರರಿಗೆಂದೇ ಪ್ರತ್ಯೇಕವಾಗಿ ಸಮುದಾಯ ಕಾಮಗಾರಿ ಆರಂಭಿಸಿ ಕೆಲಸ ನೀಡಲಾಯಿತು. ಕಾಯಕ ಬಂಧುಗಳ ನೇಮಕದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ.
–ಶರಣಪ್ಪ ಕೆಳಗೆನಮನಿ, ನರೇಗಾ ಸಹಾಯಕ ನಿರ್ದೇಶಕ
ನರೇಗಾ ಕೆಲಸದಿಂದ ನಮ್ಮ ಜೀವನ ಸುಧಾರಿಸುತ್ತಿದೆ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹಳಷ್ಟು ಅನುಕೂಲವಾಗುತ್ತಿದೆ.
–ರೇಣುಕಾ, ಅಡವಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.