ADVERTISEMENT

ಕುಷ್ಟಗಿ: ದೂಳು ಮುಕ್ತವಾಗಿಸಲು ಆಗ್ರಹ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪುರಸಭೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 12:39 IST
Last Updated 3 ನವೆಂಬರ್ 2020, 12:39 IST
ಕುಷ್ಟಗಿ ಪಟ್ಟಣದ ರಸ್ತೆ ದುರಸ್ತಿಗೆ ಒತ್ತಾಯಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು
ಕುಷ್ಟಗಿ ಪಟ್ಟಣದ ರಸ್ತೆ ದುರಸ್ತಿಗೆ ಒತ್ತಾಯಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು   

ಕುಷ್ಟಗಿ: ಇಲ್ಲಿಯ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳನ್ನು ಮುಚ್ಚಿ ಪಟ್ಟಣವನ್ನು ದೂಳು ಮುಕ್ತವಾಗಿಸಬೇಕು ಎಂದು ಹೈದರಾಬಾದ್‌ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಅವರಿಗೆ ವೇದಿಕೆ ಕಾರ್ಯಕರ್ತರು ಮಂಗಳವಾರ ಮನವಿ ಸಲ್ಲಿಸಿದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗಾಣಿಗೇರ ಮಾತನಾಡಿ,‘ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಲು ವಿಫಲರಾಗಿದ್ದಾರೆ. ಗುಂಡಿ ಮುಚ್ಚುವ ನೆಪದಲ್ಲಿ ಲೋಕೋಪಯೋಗಿ ಇಲಾಖೆಯವರು ಹಾಳುಮಣ್ಣು ತಂದು ಬೇಕಾಬಿಟ್ಟಿಯಾಗಿ ರಸ್ತೆಗೆ ಚೆಲ್ಲಿದ್ದರಿಂದ ವಾಹನಗಳು ಸಂಚರಿಸುವಾಗ ದೂಳು ಆವರಿಸಿ ಹಿಂಬದಿ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ರಸ್ತೆ ಬದಿಯಲ್ಲಿರುವ ವ್ಯಾಪಾರಿಗಳು, ಸಾರ್ವಜನಿಕರ ಆರೋಗ್ಯ ದೂಳಿನಿಂದಾಗಿ ಹದಗೆಟ್ಟಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಬಗ್ಗೆ ವೈದ್ಯರು ಹೇಳುತ್ತಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಗಮನಹರಿಸಿಲ್ಲ’ ಎಂದು ಆರೋಪಿಸಿದರು.

ADVERTISEMENT

ಮುಂದಿನ ವಾರದಿಂದ ದೀಪಾವಳಿ ಹಬ್ಬ ಆರಂಭಗೊಳ್ಳುತ್ತದೆ. ಆ ಸಂದರ್ಭದಲ್ಲಾದರೂ ರಸ್ತೆಗಳನ್ನು ದುರಸ್ತಿಗೊಳಿಸಿ ದೂಳು ಆವರಿಸದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ, ರಸ್ತೆ ದುರಸ್ತಿ ಮತ್ತು ಧೂಳು ಮುಕ್ತವಾಗಿಸುವಲ್ಲಿ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಪುರಸಭೆ ಅಧಿಕಾರಿ ಖತೀಬಸಾಬ್, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ತಳುವಗೇರಾ, ಪ್ರಮೋದ ಬಡಿಗೇರ, ಯಮನೂರು ಕೋಮಾರ್, ಪರಶುರಾಮ ಬೋದೂರು, ರಮೇಶ ತೊಂಡಿಹಾಳ, ಪ್ರಕಾಶ ಹಕ್ಕಲ ಹಾಗೂ ನಾಗಪ್ಪ ಹೊಸವಕ್ಕಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.