ಹನುಮಸಾಗರ: ಹಸಿರು ಎಲೆಗಳ ಗಿಡಗಳು, ಆನೆ, ಜಿರಾಫೆ, ಚಿಟ್ಟೆ... ಇದ್ಯಾವುದೋ ಉದ್ಯಾನ, ಪ್ರಾಣಿಸಂಗ್ರಹಾಲಯ ಎಂದುಕೊಂಡರೆ ನಿಮ್ಮ ಊಹೆ ತಪ್ಪು.
ಇದು, ಅಡವಿಭಾವಿಯ ಸರ್ಕಾರಿ ಶಾಲೆಯ ಮನಮೋಹಕ ಪರಿಸರ.
ಶಾಲೆ ಆವರಣದಲ್ಲಿ ಬಗೆಬಗೆಯ ಗಿಡಗಳು ಹಸಿರಿನಿಂದ ನಳನಳಿಸುತ್ತಿದ್ದರೆ ಗೋಡೆಗಳ ವಿವಿಧ ಪ್ರಾಣಿ, ಪಕ್ಷಿಗಳು ಚಿತ್ರ ಬಿಡಿಸಲಾಗಿದೆ. ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರದಿಂದ ಶಾಲೆ ಹೊಸರೂಪ ಪಡೆದಿದೆ.
ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ ಇಂಗ್ಲೀಷ್ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತವೆ. ಒಟ್ಟು 350 ವಿದ್ಯಾರ್ಥಿಳಿದ್ದು 17 ಮಂದಿ ಶಿಕ್ಷಕರು ಇದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ನವೀನ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ.
ಶಾಲೆಯಲ್ಲಿರುವ ಎರಡು ಸ್ಮಾರ್ಟ್ ಕ್ಲಾಸ್ ರೂಂ, ಕಂಪ್ಯೂಟರ್, ವಿಜ್ಞಾನ-ಗಣಿತ ಕಿಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಮಕ್ಕಳು ಆಧುನಿಕ ಕಲಿಕೆಗೆ ಸಹಕಾರಿಯಾಗಿವೆ. ಊರಿನ ಶಿಕ್ಷಣ ಪ್ರೇಮಿಗಳು, ಎಸ್‌ಡಿಎಂಸಿ ಸದಸ್ಯರು ಸೇರಿ ಹಣ ಸಂಗ್ರಹಿಸಿ ಖರೀದಿಸಿದ್ದಾರೆ.
ಶಾಲೆಯ ಸುತ್ತ 1 ಎಕರೆ ವಿಸ್ತೀರ್ಣದಲ್ಲಿ ಸುಮಾರು 200 ರಿಂದ 250 ಗಿಡಗಳನ್ನು ನೆಡುವ ಮೂಲಕ ಹಸಿರುಪಥ ನಿರ್ಮಿಸಲಾಗಿದೆ. ‘ಕಾಡು-ನಾಡು-ಜಲ’ ಎಂಬ 3 ತತ್ವಗಳನ್ನು ಒಳಗೊಂಡಂತೆ ಶಾಲಾ ಗೋಡೆಗಳಿಗಳ ಮೇಲೆ ಚಿತ್ರಗಳನ್ನು ಬಿಡಿಲಾಗಿದೆ.
ಬಾಲಕರ ಆಟದ ಮೈದಾನ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯು ಉತ್ತಮವಾಗಿದ್ದು ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ವಾಲಿಬಾಲ್ ಮತ್ತು ಕ್ಕೊಕ್ಕೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.
ಸಿಆರ್‌ಪಿ, ಬಿಇಒ ಶಾಲೆಯ ಪರಿಸರಕ್ಕೆ ಮೆಷ್ಷುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಶಾಲೆಯ ಸೌಂದರ್ಯ ಪರಿಸರ ಸ್ನೇಹಿ ವಾತಾವರಣ ತಾಂತ್ರಿಕ ಸೌಲಭ್ಯ ಮೆಚ್ಚುಗೆಯ ಹಿಂದೆ ಶಿಕ್ಷಕರ ಗ್ರಾಮಸ್ಥರ ಎಸ್‌ಡಿಎಂಸಿ ಸದಸ್ಯರ ಹಳೆಯ ವಿದ್ಯಾರ್ಥಿಗಳ ಸಹಕಾರದ ಶಕ್ತಿ ಇದೆಶಂಕ್ರಪ್ಪ ರಾಠೋಡ ಮುಖ್ಯಶಿಕ್ಷಕ ಅಡವಿಬಾವಿ ಶಾಲೆ
ನಾವು ಹಸಿರು ಪರಿಸರದಲ್ಲಿ ನೈತಿಕ ಮೌಲ್ಯಗಳೊಂದಿಗೆ ಶಿಕ್ಷಣ ನೀಡುತ್ತಿರುವ ಹೆಮ್ಮೆ ಇದೆ. ‘ನಮ್ಮ ಊರಿನ ಶಾಲೆ’ ಈಗ ನಿಜಕ್ಕೂ ನಾಡಿಗೆ ಮಾದರಿಯಾಗಿ ಬೆಳೆಯುತ್ತಿದೆ. ಈ ಪ್ರಯತ್ನ ಮುಂದುವರಿಯಲಿ ಎಂಬ ಆಶಯವಿದೆಸುನೀತಾ ಹಿರಿಮನಿ ಎಸ್‌ಡಿಎಂಸಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.