ADVERTISEMENT

ಕೊಪ್ಪಳ: ಅಜ್ಜನ ಜಾತ್ರೆಯಲ್ಲಿ ದೇಶಿ ಕ್ರೀಡೆಗಳ ಸಾಹಸ

ಗಮನ ಸೆಳೆದ ಮಲ್ಲಕಂಬ ಪ್ರದರ್ಶನ, ಸಾಂಗ್ರಾಣಿ ಕಲ್ಲು ಎತ್ತಿ ಸಂಭ್ರಮಿಸಿದ ಯುವಕರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 4:46 IST
Last Updated 16 ಜನವರಿ 2025, 4:46 IST
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಶ್ವಾನ ಪ್ರದರ್ಶನದ ನೋಟ –ಪ್ರಜಾವಾಣಿ ಚಿತ್ರಗಳು
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಶ್ವಾನ ಪ್ರದರ್ಶನದ ನೋಟ –ಪ್ರಜಾವಾಣಿ ಚಿತ್ರಗಳು   

ಕೊಪ್ಪಳ: ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯು ಉದ್ಯಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗವಿಶ್ರೀ ಕ್ರೀಡಾ ಉತ್ಸವದಲ್ಲಿ ಬುಧವಾರ ದೇಶಿ ಕ್ರೀಡೆಗಳ ಸಂಭ್ರಮ ಹಾಗೂ ಸಾಹಸ ಕಂಡುಬಂದಿತು.

ಗವಿಮಠದ ಆವರಣದಲ್ಲಿ ನಡೆದ ಕ್ರೀಡೆಗಳಲ್ಲಿ ಹೊಳೆ ಆಲೂರಿನ ಜ್ಞಾನ ಸಿಂಧು ಅಂಧಮಕ್ಕಳ ಶಾಲೆ, ಸಿರಗುಪ್ಪದ ಯೋಗ ಮಲ್ಲಕಂಬ ಮತ್ತು ಕೊಪ್ಪಳದ ಮಹಿಳಾ ಮಲ್ಲಕಂಬದ ತಂಡದವರಿಂದ ನಡೆದ ಪ್ರದರ್ಶನ ಜನ ಬೆರಗು ಕಣ್ಣಿನಿಂದ ನೋಡುವಂತೆ ಮಾಡಿತು. ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಮಲ್ಲಕಂಬ ಸಾಹಸದಲ್ಲಿ ವಿದ್ಯಾರ್ಥಿನಿಯರು ಹಗ್ಗವನ್ನು ಸರಸರನೇ ಏರಿ ವಿವಿಧ ಆಸನಗಳನ್ನು ಭಯವಿಲ್ಲದೆ ಸುಲಭವಾಗಿ ಮಾಡುತ್ತಿದನ್ನು ಗಮನಿಸಿದ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ತಟ್ಟಿ ಮಲ್ಲಕಂಬದ ಮಲ್ಲರನ್ನು ಪ್ರೋತ್ಸಾಹಿಸಿದರು. ಬಳಿಕ ನಡೆದ ಗ್ರಾಮೀಣ ಕ್ರೀಡೆ ಸಾಂಗ್ರಾಣಿ ಕಲ್ಲು ಎತ್ತುವ ಯುವಕರ ದೈಹಿಕ ಸಾಮರ್ಥ್ಯಕ್ಕೆ ಜನ ಭೇಷ್‌ ಎಂದರು. 50ರಿಂದ 100ಕ್ಕೂ ಹೆಚ್ಚು ತನಕದ ತೂಕದ ಕಲ್ಲುಗಳನ್ನು ಎತ್ತುತ್ತಿದ್ದಂತೆ ಜನ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದರು.

ADVERTISEMENT

ಆಧುನಿಕ ಭರಾಟೆಯ ನಡುವೆ ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು, ಅವುಗಳನ್ನು ಮತ್ತೆ ಕಣ್ತುಂಬಿಕೊಳ್ಳಲು ಗವಿಶ್ರೀ ಕ್ರೀಡಾ ಉತ್ಸವ ವೇದಿಕೆ ಒದಗಿಸಿತು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯು ಯುವಕರ ಶಕ್ತಿ ಪ್ರದರ್ಶನಕ್ಕೆ ಕಾರಣವಾಯಿತು.

ಯುವಕರು ಸಂಗ್ರಾಣಿ ಕಲ್ಲು ಎತ್ತುವಾಗ ನಾನಾ ರೀತಿಯ ಕಸರತ್ತುಗಳನ್ನು ನಡೆಸುವ ಮೂಲಕ ಸಾಹಸ ಮಾಡಿದರು.  ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಹುರಿದುಂಬಿಸಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ ’ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೈಸೂರು ದಸರಾ ಕ್ರೀಡಾಕೂಟದ ಮಾದರಿಯಲ್ಲಿ ಮೊದಲ ಬಾರಿಗೆ ಇಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರಿಂದ ಕ್ರೀಡಾಪಟುಗಳಿಗೂ ಅವಕಾಶ ಕೊಟ್ಟಂತಾಗುತ್ತದೆ’ ಎಂದರು.

ಪೊಲೀಸರಿಂದ ನಡೆದ ಶ್ವಾನ ಪ್ರದರ್ಶನ ಕೂಡ ಗಮನ ಸೆಳೆಯಿತು. ಅಪರಾಧ ಪ್ರಕರಣಗಳನ್ನು ಪತ್ತೆ ಹೆಚ್ಚುವಲ್ಲಿ ನಾಯಿಗಳು ಹೇಗೆ ಪ್ರಮುಖ ಪ್ರದರ್ಶನ ವಹಿಸುತ್ತವೆ? ಅವುಗಳ ಕಾರ್ಯವಿಧಾನ ಹೇಗೆ? ಎನ್ನುವ ಮಾಹಿತಿಯನ್ನು ಪ್ರದರ್ಶನದ ಮೂಲಕ ತೋರಿಸಿಕೊಟ್ಟರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಮತ್ತು ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.   

ಗವಿಮಠ ಜಾತ್ರೆಯಲ್ಲಿ ಮಕ್ಕಳಿಂದ ಮಲ್ಲಕಂಬ ಸಾಹಸ ಪ್ರದರ್ಶನ 
ಗವಿಮಠದ ಜಾತ್ರೆಯಲ್ಲಿ ಮಲ್ಲಕಂಬ ಸಾಹಸ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.