ಯಲಬುರ್ಗಾ: 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ದೊರೆಯಲಿದ್ದು, ಹೊಸದಾಗಿ ಸೇರ್ಪಡೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಪ್ರಾಪ್ತವಾಗಿರುವ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. 18 ವರ್ಷ ಪೂರ್ಣಗೊಳಿಸಿದ ಯುವಕ ಯುವತಿಯರು ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಂಡು ಚುನಾವಣಾ ಸಂದರ್ಭದಲ್ಲಿ ಹಕ್ಕು ಚಲಾಯಿಸಿ ದೇಶದ ಅಭಿವೃದ್ಧಿಗೆ ಸಹಕರಿಸುವುದು ಮುಖ್ಯ ಎಂದರು.
ಹಿರೇವಂಕಲಕುಂಟಾ ಉಪ ತಹಶೀಲ್ದಾರ್ ವಿಜಯಕುಮಾರ ಗುಂಡೂರು ಮಾತನಾಡಿ, ಯುವ ಜನತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸುವುದರಿಂದ ವಿಶೇಷ ಹಕ್ಕು ದೊರೆಯಲಿದೆ. ನೋಂದಣೆ ಬಗ್ಗೆ ಪರಿಷ್ಕರಿಸುವುದು ಹಾಗೂ ಖಾತ್ರಿಗೊಳಿಸುವುದು ಕೂಡ ಅಗತ್ಯವಿದೆ. ಕೆಲವೊಂದು ಸಂದರ್ಭದಲ್ಲಿ ಹೆಸರು ಅಥವಾ ಇನ್ನಿತರ ಮಾಹಿತಿಯು ತಪ್ಪಾಗಿ ದಾಖಲಾಗಿರುವ ಸಾಧ್ಯತೆ ಇರುವುದರಿಂದ ತಿದ್ದುಪಡಿಗೆ ಅವಕಾಶವಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಎಕೆ.ಎಚ್. ಛತ್ರದ್ ಮಾತನಾಡಿ, ಯುವ ಪಡೆ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಬೇಕು ಎಂದು ಸಲಹೆ ನೀಡಿದರು. ಗ್ರೇಡ್-2 ತಹಶೀಲ್ದಾರ್ ನಾಗಪ್ಪ ಸಜ್ಜನ ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.