ADVERTISEMENT

ಕುಷ್ಟಗಿ | ಶಕ್ತಿದೇವತೆಯ ಪೂಜೆಗೆ ಭಕ್ತರ ಸಂಕಲ್ಪ

65 ವರ್ಷಗಳ ಬಳಿಕ ಕುಷ್ಟಗಿಯ ಗ್ರಾಮದೇವತೆ ಜಾತ್ರೆ ಪುನರಾರಂಭ

ನಾರಾಯಣರಾವ ಕುಲಕರ್ಣಿ
Published 7 ಏಪ್ರಿಲ್ 2024, 6:37 IST
Last Updated 7 ಏಪ್ರಿಲ್ 2024, 6:37 IST
ಪ್ರತಿಷ್ಠಾಪನೆಗೊಳ್ಳಲಿರುವ ದ್ಯಾಮವ್ವ ದೇವಿಯ ಬೆಳ್ಳಿ ಪ್ರತಿಮೆ
ಪ್ರತಿಷ್ಠಾಪನೆಗೊಳ್ಳಲಿರುವ ದ್ಯಾಮವ್ವ ದೇವಿಯ ಬೆಳ್ಳಿ ಪ್ರತಿಮೆ   

ಕುಷ್ಟಗಿ: ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.

ಏ.9 ರಿಂದ 20ರವರೆಗೆ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು, ವಿವಿಧ ರೀತಿಯ ಸಾಂಪ್ರದಾಯಿಕ ಆಚರಣೆಗಳು ನಡೆಯಲಿದ್ದು, ಶಕ್ತಿದೇವತೆಯ ಭಕ್ತಿ ಸೇವೆ ಪಟ್ಟಣ ಸಕಲ ರೀತಿಯಿಂದಲೂ ಸಜ್ಜುಗೊಳ್ಳುತ್ತಿದೆ.

ಓಣಿ, ಮುಖ್ಯರಸ್ತೆಗಳು ವೃತ್ತಗಳನ್ನು ಸಿಂಗರಿಸುವ ಕೆಲಸ ಆರಂಭಗೊಂಡಿದ್ದು, ಜಾತಿ ಸಮುದಾಯಗಳನ್ನು ಮೀರಿ ಭಕ್ತರು ಕಳೆದ ಒಂದು ತಿಂಗಳಿಂದ ಸೇವಾ ಕೈಂಕರ್ಯಗಳಲ್ಲಿ ಶ್ರದ್ಧೆ, ಭಕ್ತಿಯೊಂದಿಗೆ ತೊಡಗಿದ್ದಾರೆ.

ADVERTISEMENT

ಜಾತ್ರೆಯನ್ನು ಅಭೂತಪೂರ್ವ ರೀತಿಯಲ್ಲಿ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದು, ಕಳೆದ 65 ವರ್ಷಗಳಿಂದಲೂ ದ್ಯಾಮವ್ವ ದೇವಿಯ ಜಾತ್ರೆ ನಿಂತು ಹೋಗಿದೆ ಎನ್ನಲಾಗಿದೆ. ಈಗ ಊರಿನ ಹಿರಿಯರು, ಯುವಕರು ಸೇರಿ ಈ ವರ್ಷ ಜಾತ್ರೆ ನಡೆಸುವುದಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಆರೂವರೆ ದಶಕಗಳಿಂದಲೂ ಸ್ಥಗಿತಗೊಂಡಿದ್ದ ದೇವಿ ಜಾತ್ರೆ ಈಗ ಪುನರಾರಂಭಕ್ಕೆ ಈಗ ಪ್ರೇರಣೆ ದೊರೆತಿದ್ದು ಅದರಿಂದ ಪಟ್ಟಣದ ಜನರ ಸಂಭ್ರಮ ಇಮ್ಮಡಿಗೊಂಡಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ರವಿಕುಮಾರ ಹಿರೇಮಠ ದೊಡ್ಡಪ್ಪ ಕಂದಗಲ್, ಶಿವಣ್ಣ ತುರಕಾಣಿ ಇತರರು ಸಂತಸ ಹಂಚಿಕೊಂಡರು.

ಧಾರ್ಮಿಕ ಕಾರ್ಯಕ್ರಮ: ಏ.9ರ ಬೆಳಗಿನ ಜಾವದಿಂದ ಪಟ್ಟಣದ ಸುತ್ತ ಈಗಾಗಲೇ ಗುರುತಿಸಲಾಗಿರುವ 28 ಕಿ.ಮೀ ಪರಿಧಿಯ ಸೀಮಾಂತರದಲ್ಲಿ ಶಾಂತಿ, ಸಮೃದ್ಧಿಯ ಸಂಕೇತವಾಗಿ ಹಾಲುತುಪ್ಪದ ಸಿಂಚನ (ಎರೆಯುವುದು) ನಡೆಯಲಿದೆ. ಹಾಲುತುಪ್ಪ ಹೊಂದಿದ ನಾಲ್ಕು ದೊಡ್ಡ ಟ್ಯಾಂಕರ್‌ಗಳನ್ನು ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ಸೀಮೆಯ ಸುತ್ತಲಿನ ದಾರಿಯನ್ನೆಲ್ಲ ಸ್ವಚ್ಛಗೊಳಿಸಲಾಗಿದೆ.

ದೇವಿಪೂಜೆ ನಂತರ ಕಂಕಣಧಾರಣೆ, ನಂತರ ಪಟ್ಟಣದ ಎಲ್ಲ ದೇವಸ್ಥಾನಗಳಲ್ಲಿಯೂ ನಂದಾದೀಪ ಬೆಳಗಿಸಲಾಗುತ್ತದೆ. ದ್ಯಾಮವ್ವ ದೇವಿಯ ಕಳಸ ಸೇರಿ ಒಟ್ಟು ಆರು ಕಳಸಗಳನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ಏಳು ದಿನಗಳವರೆಗೆ ಆಹೋರಾತ್ರಿ ಸಪ್ತಭಜನೆ ಮೂಲಕ ಶಿವನಾಮ ಸಂಕೀರ್ತನೆ ನಡೆಯಲಿದೆ. ದೇವಿಯನ್ನು ಗಂಗಾಸ್ನಾನಕ್ಕೆ ಕರೆದೊಯ್ಯುವುದು, ಪುರಪ್ರವೇಶ, ವಿವಿಧ ಮನೆಗಳಲ್ಲಿ ಉಡಿ ತುಂಬುವುದು ಇತರೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಈಗಾಗಲೇ ವಿವಿಧ ಗ್ರಾಮಗಳ ಭಕ್ತರು ನೂರಕ್ಕೂ ಅಧಿಕ ಚಕ್ಕಡಿಗಳಲ್ಲಿ ತಂದ ಹೊಂಗೆಸೊಪ್ಪಿನ ಮೂಲಕ ಹಂದರ ಅಲಂಕರಿಸಲಾಗಿದೆ. ₹ 7.50 ಲಕ್ಷ ವೆಚ್ಚದಲ್ಲಿ ತಯಾರಿಸಲಾಗಿರುವ ದ್ಯಾಮವ್ವ ದೇವಿ ಅಮ್ಮನ ಬೆಳ್ಳಿಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಪೂರ್ಣಾಹುತಿ, 111 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆಯಲಿವೆ.

ನಿಂತು ಹೋಗಿದ್ದ ದೇವಿ ಆರಾಧನೆಯನ್ನು ಮುನ್ನಡೆಸಿಕೊಂಡು ಹೋಗುವುದರಿಂದ ಪಟ್ಟಣದ ಜನರಲ್ಲಿ ಶಾಂತಿ, ನೆಮ್ಮದಿ ಸಮೃದ್ಧಿ ದೊರೆಯಲಿದೆ ಎಂಬ ನಂಬಿಕೆ, ಆಶಾ ಭಾವನೆಯೊಂದಿಗೆ ದೇವಿ ಜಾತ್ರೆ ನಡೆಸುವ ನಿಟ್ಟಿನಲ್ಲಿ ಪಟ್ಟಣದ ಎಲ್ಲ ಜನರೂ ಕೈಜೋಡಿಸುತ್ತಿದ್ದಾರೆ ಎಂದು ರವಿಕುಮಾರ  ವಿವರಿಸಿದರು.

ಗ್ರಾಮದೇವತೆ ದೇವಸ್ಥಾನವನ್ನು ಅಲಂಕರಿಸಿರುವುದು

ಜಾತಿ ಮತ ಮರೆತು ಪಟ್ಟಣದ ಜನರೆಲ್ಲ ಒಂದಾಗಿ ದೇವಿ ಆರಾಧನೆಗೆ ಮುಂದಾಗಿದ್ದು ಶಾಂತಿ ನೆಮ್ಮದಿ ದೊರೆಯುವ ಆಶಾಭಾವನೆ ಹೊಂದಲಾಗಿದೆ.

-ರವಿಕುಮಾರ ಹಿರೇಮಠ ಜಾತ್ರಾ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.