ADVERTISEMENT

ಕೊಪ್ಪಳ: ವಿವಾದ ತಣ್ಣಗಾದ ಬಳಿಕ ರಾಜೀನಾಮೆ ಪತ್ರ ವೈರಲ್‌!

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 2:45 IST
Last Updated 27 ಜುಲೈ 2022, 2:45 IST
ಮಹೇಂದ್ರ ಚೋಪ್ರಾ
ಮಹೇಂದ್ರ ಚೋಪ್ರಾ   

ಕೊಪ್ಪಳ: ಅನುದಾನ ಒದಗಿಸುವ ವಿಷಯದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಡೆಯಿಂದ ಬೇಸತ್ತು ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಮಹೇಂದ್ರ ಚೋಪ್ರಾ ಅವರ ಪತ್ರ ಮಂಗಳವಾರ ಸಾಮಾಜಿಕ ತಾಣದಲ್ಲಿ ವೈರಲ್‌ ಅಗಿದೆ.

’ನಾನು ಸುಮಾರು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇದೇ ಪಕ್ಷದ ವತಿಯಿಂದ ನಗರಸಭೆ ಸದಸ್ಯನಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕುಟುಂಬದ ಜವಾಬ್ದಾರಿ ಹೆಚ್ಚಾಗಿರುವ ಕಾರಣ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಅಗುತ್ತಿಲ್ಲ. ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನಗರಸಭೆ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಮಹೇಂದ್ರ ಚೋಪ್ರಾ ಅವರ ಲೆಟರ್‌ ಹೆಡ್‌ನಲ್ಲಿ ಬರೆದ ಪತ್ರ ವೈರಲ್‌ ಆಗಿದೆ. ಅವರು ಈ ಪತ್ರವನ್ನು ಜು. 13ರಂದು ಬರೆದಿದ್ದರು.

ಕೆಲ ದಿನಗಳ ಹಿಂದೆ ಅಸಮಾಧಾನಗೊಂಡಿದ್ದ ಚೋಪ್ರಾ ಅವರನ್ನು ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಶಾಸಕ ಬಸವರಾಜ ಹಿಟ್ನಾಳ ಅವರು ಸಮಾಧಾನ ಪಡಿಸಿದ್ದರಿಂದ ವಿವಾದದ ಕಾವು ತಣ್ಣಗಾಗಿತ್ತು.

ADVERTISEMENT

ಈಗ ನಗರಸಭೆ ಮಾಜಿ ಸದಸ್ಯ ಮಾನವಿ ಪಾಷಾ ತಮ್ಮ ಫೇಸ್‌ಬುಕ್‌ನಲ್ಲಿ ರಾಜೀನಾಮೆ ಪತ್ರವನ್ನು ಹಾಕಿ ‘ಮಾತಿನ ಪ್ರಕಾರ ಕೊನೆಗೂ ರಾಜೀನಾಮೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಇದನ್ನು ಸ್ವೀಕಾರ ಮಾಡಬೇಕು’ ಎಂದು ಬರೆದಿದ್ದಾರೆ.

ಈ ಕುರಿತು ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಚೋಪ್ರಾ ’ಕೆಲವು ದಿನಗಳಿಂದ ನಾನು ಊರಿನಲ್ಲಿ ಇರಲಿಲ್ಲ. ಮಾಧ್ಯಮದವರ ಮೂಲಕ ಈ ವಿಷಯ ಗೊತ್ತಾಯಿತು. ಅಸಮಾಧಾನ ಮುಗಿದು ಹೋದ ಅಧ್ಯಾಯ. ಈಗ ಎಲ್ಲವೂ ಸರಿಯಾಗಿದೆ. ಕೆಲವರು ಇದೇ ವಿಷಯ ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.