
ಕೊಪ್ಪಳದಲ್ಲಿ ಭಾನುವಾರ ನಡೆದ ಮೋಚಿ (ಮೋಚಿಗಾರ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಹಾಗೂ ಇತರರು ಉದ್ಘಾಟಿಸಿದರು
ಕೊಪ್ಪಳ: ‘ಭಾರತದ ಯಾವ ಧರ್ಮಗ್ರಂಥಗಳು ಕೂಡ ಮನುಷ್ಯನನ್ನು ಸಮಾನವಾಗಿ ಕಂಡಿಲ್ಲ. ಆದರೆ ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನ ಮಾತ್ರ ದೇಶದ ಎಲ್ಲ ಜನರಲ್ಲಿಯೂ ಸಮಾನತೆ ಪಾಠ ಹೇಳಿಕೊಟ್ಟಿದೆ. ಅಂಥ ಸಂವಿಧಾನಕ್ಕೆ ಈಗ ಕಂಟಕ ಎದುರಾಗಿದೆ’ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಹೇಳಿದರು.
ಹುಬ್ಬಳ್ಳಿಯ ಪೇ ಬ್ಯಾಕ್ ಟು ಮೋಚಿ ಸೊಸೈಟಿ ಎಜುಕೇಷನಲ್ ಟ್ರಸ್ಟ್ ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2ನೇ ಹಂತದ ಪ್ರೋತ್ಸಾಹಧನ ವಿತರಣೆ ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಅಂಬೇಡ್ಕರ್ ಹಾಗೂ ಬುದ್ದನ ಹೆಸರಿನಲ್ಲಿ ಭವನಗಳನ್ನು ಕಟ್ಟುವುದು ಸುಲಭ. ಆದರೆ ಮನುಷ್ಯರ ನಡುವಿನ ಸಂಬಂಧಗಳನ್ನು ಬೆಸೆಯುವುದು ಕಷ್ಟವಾಗಿದೆ. ಪ್ರಸ್ತುತ ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ ಜಾತಿ, ಧರ್ಮದ ಹೆಸರಿನಲ್ಲಿ ನೋಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ನಾನು, ನನ್ನದು ಎನ್ನುವ ಸ್ವಾರ್ಥವೇ ಮೇಲಾಗಿದ್ದು ದೇಶದಲ್ಲಿ ಮನುಷ್ಯರ ನಡುವೆ ಒಡಕ್ಕುಂಟು ಮಾಡುವ ಕೆಲಸ ನಡೆಯುತ್ತಿದೆ. ಆದರೆ ಅಂಬೇಡ್ಕರ್, ಬಸವಣ್ಣ ಹಾಗೂ ಬುದ್ಧ ಜನರನ್ನು ಅಪ್ಪಿಕೊಂಡರು. ಪ್ರಸ್ತುತ ದಿನಮಾನಗಳಲ್ಲಿ ಸಂವಿಧಾನವನ್ನು ಇಲ್ಲವಾಗಿಸಲು ಪ್ರಯತ್ನಗಳು ನಡೆಯುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದ ಅವರು ‘ಮನುಷ್ಯ ಸಮಾಜ ಜೀವಿಯಾಗಿ ಬೆಳೆಯಲು ಶೈಕ್ಷಣಿಕ ಜ್ಞಾನ ಅಗತ್ಯ. ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು ಅದನ್ನು ಸಮಾಜಕ್ಕೆ ವಾಪಸ್ ಕೊಡಬೇಕು’ ಎಂದು ಸಲಹೆ ನೀಡಿದರು.
ಬಾಬು ಜಗಜೀವನರಾಂ ರಾಷ್ಟ್ರೀಯ ಫೌಂಡೇಷನ್ ಸದಸ್ಯೆ ಸೋಮಕ್ಕ ಮಾತನಾಡಿ ‘ಸಮಾನ ಅವಕಾಶ ಕೊಟ್ಟ ಮಹಾನ್ ಚೇತನ ಅಂಬೇಡ್ಕರ್. ಅವಕಾಶ ವಂಚಿತ ಸಮಾಜಕ್ಕೆ ಅವರು ಎಲ್ಲ ಭಾಗ್ಯಗಳನ್ನೂ ಕೊಟ್ಟರು. ಆದರೆ ಈಗ ಅವರನ್ನು ಮತ್ತೆ ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ. ಮನುಷ್ಯ ವಿಶ್ವಮಾನವನಾಗಿಯೇ ಹುಟ್ಟುತ್ತಾನೆ. ಕಾಲಕ್ರಮೇಣ ಸಂಕುಚಿತನಾಗುತ್ತಾನೆ. ಮತ್ತೆ ವಿಶ್ವ ಮಾನವನಾಗಲು ಎಲ್ಲರಿಗೂ ಶಿಕ್ಷಣ ಅಗತ್ಯ’ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ರಮೇಶ ಕೋಳೂರ, ಜ್ಞಾನಬಂಧು ಶಿಕ್ಷಣ ಸಂಸ್ಥೆ ಅಧ್ಯಕ್ಷರೂ ಆದ ಸಮಾಜದ ಮುಖಂಡ ದಾನಪ್ಪ ಕವಲೂರು, ಉದ್ಯಮಿ ಮಹಾದೇವಪ್ಪ ಸ್ವಾದಿ, ದಲಿತ ಬಹುಜನ ಚಳವಳಿ ಜಿಲ್ಲಾಧ್ಯಕ್ಷೆ ನಾಗಮ್ಮ ಹಾಲಿನವರ, ಟ್ರಸ್ಟ್ ಕಾರ್ಯದರ್ಶಿ ಜ್ಯೋತಿ ಬ್ಯಾಹಟ್ಟಿ, ಟ್ರಸ್ಟ್ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಿ, ಸಮಾಜದ ಮುಖಂಡರಾದ ಮಂಜುನಾಥ ಕೋಳೂರು, ಯಲ್ಲಪ್ಪ ಕೋಳೂರು, ಗಣಪತಿ ಸ್ವಾದಿ, ಕಿರಣಕುಮಾರ್ ತರಕೇರಿ, ಯಶೋಧಾ ಬಂಡಿ, ಹುಲಗಪ್ಪ ಹುನಗುಂದ, ವೀರೇಶ ತಾವರಗೇರಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನಾವು ಅನುಭವಿಸಿದ ಸಮಸ್ಯೆ ಬೇರೆಯವರು ಎದುರಿಸಬಾರದು ಎನ್ನುವ ಕಾರಣಕ್ಕೆ ಸಮಾಜದ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಲಾಗುತ್ತಿದೆ. ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವಾಗಬೇಕುಬಿ.ಎಸ್. ಮದಕಟ್ಟಿ, ಕೆಎಂಸಿ ನಿವೃತ್ತ ನಿರ್ದೇಶಕ
<p class="quote">ನಮ್ಮ ಸಮಾಜದ ಜನ ಸಮಾಜಮುಖಿ ಚಟುವಟಿಕೆಗಳನ್ನು ಮಾಡಬೇಕು. ಸಾಮಾಜಿಕ ಸೇವೆ ಜವಾಬ್ದಾರಿ ಎನ್ನುವುದನ್ನು ಅರಿತುಕೊಂಡರೆ ಸಮಾಜಮುಖಿಯಾಗಿ ಬದುಕಲು ಸಾಧ್ಯ</p> <p>ಸುಶೀಲ್ ಕುಮಾರ್,<span class="Designate"> ಮೋಚಿ ಸಮುದಾಯದ ಮುಖಂಡ</span></p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.