ADVERTISEMENT

ಜಮೀನಿಗೆ ತಿಪ್ಪೆಗೊಬ್ಬರ ಹಾಕುವಲ್ಲಿ ನಿರತ ರೈತರು

ಹನುಮಸಾಗರ: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:26 IST
Last Updated 2 ಜೂನ್ 2020, 15:26 IST
ಹನುಮಸಾಗರ ಭಾಗದಲ್ಲಿ ರೈತರು ತಿಪ್ಪೆಗೊಬ್ಬರವನ್ನು ಜಮೀನಿಗೆ ಮಿಶ್ರ ಮಾಡುತ್ತಿರುವುದು ಮಂಗಳವಾರ ಕಂಡು ಬಂತು
ಹನುಮಸಾಗರ ಭಾಗದಲ್ಲಿ ರೈತರು ತಿಪ್ಪೆಗೊಬ್ಬರವನ್ನು ಜಮೀನಿಗೆ ಮಿಶ್ರ ಮಾಡುತ್ತಿರುವುದು ಮಂಗಳವಾರ ಕಂಡು ಬಂತು   

ಹನುಮಸಾಗರ: ಅಲ್ಲಲ್ಲಿ ಮುಂಗಾರು ಮಳೆಯಾಗಿದ್ದು ರೈತರು ಬಿತ್ತನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವುದು ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದೆ.

ಈಗಾಗಲೇ ಬಿತ್ತನೆಗಾಗಿ ಉಳಿಮೆ ಮಾಡಿದ್ದು ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಗೊಬ್ಬರ ಮಣ್ಣಿನಲ್ಲಿ ಮಿಶ್ರ ಮಾಡಿದ ನಂತರ ಒಂದು ಉತ್ತಮ ಮಳೆಯದರೆ ಕೂರಗಿ ಹಿಡಿದುಕೊಂಡು ಬಿತ್ತನೆ ಹೋಗಲು ಸಾಧ್ಯವಾಗುತ್ತದೆ ಎಂಬುದು ರೈತರ ಲೆಕ್ಕಾಚಾರ.

ಗ್ರಾಮಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಆಗಿರುವುದರಿಂದಾಗಿ ರೈತರು ಕೈಯಲ್ಲಿ ಹಣ ಹಿಡಿದುಕೊಂಡು ಅಲೆದಾಡಿದರೂ ತಿಪ್ಪೆಗೊಬ್ಬರ ಸಿಗದ ಪರಿಸ್ಥಿತಿ ನಿರ್ಮಾಣವಾಗಿರುವುದು ಕಂಡು ಬರುತ್ತಿದೆ.

ADVERTISEMENT

'ತಿಪ್ಪೆ ಗೊಬ್ಬರವಿಲ್ಲದೆ ಬಿತ್ತನೆ ಮಾಡಿದರೆ ಮಣ್ಣು ಸತ್ವರಹಿತವಾಗಿ ಹೆಚ್ಚು ಇಳುವರಿ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಈ ಕಾರಣದಿಂದಲೇ ಮಸಾರಿ ಹಾಗೂ ಎರಿ ಭಾಗದಲ್ಲಿನ ರೈತರು ಕೊಟ್ಟಿಗೆ ಗೊಬ್ಬರಕ್ಕೆ ಹಾತೊರೆಯುತ್ತಿರುತ್ತಾರೆ' ಎಂದು ರೈತ ಸಂಗಪ್ಪ ಹಡಪದ ಹೇಳುತ್ತಾರೆ.

ಒಂದು ಟ್ರ್ಯಾಕ್ಟರ್ ತಿಪ್ಪೆಗೊಬ್ಬರದ ಬೆಲೆ ₹ 2000 ವರೆಗೂ ಇದೆ. ಸಾವಯವ ಸಂಯುಕ್ತಗಳನ್ನು ಹೊಂದಿರುವ ಈ ತಿಪ್ಪೆಗೊಬ್ಬರವನ್ನು ರೈತರು ಒಂದು ಬಾರಿ ಜಮೀನಿಗೆ ಹಾಕಿದರೆ ನಾಲ್ಕಾರು ವರ್ಷ ಮಣ್ಣಿನ ಕಸುವು ಉತ್ತಮವಾಗಿರುತ್ತದೆ. ಜೊತೆಗೆ ಮಣ್ಣು ಸ್ಪಂಜಿನಂತೆ ಹಗುರವಾಗಿ ಸಸ್ಯದ ಬೇರುಗಳಿಗೆ ಸರಳವಾಗಿ ಗಾಳಿ ಸಿಗುವಂತೆ ಹಾಗೂ ಹೆಚ್ಚು ತೇವಾಂಶ ಹೊಂದಿರುವಂತೆ ಕಾಪಾಡುತ್ತದೆ. ಈ ಕಾರಣಗಳಿಂದಲೇ ಎಷ್ಟೆ ರಾಸಾಯನಿಕ ಗೊಬ್ಬರ ಬಳಸಿದರೂ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರದ ಅವಶ್ಯಕತೆ ಇರುತ್ತದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಹೇಳಿದರು.

ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಸಗಣಿ, ಗಂಜಳ ಮುಟ್ಟದೆ ಕೃಷಿ ಮಾಡುವ ರೈತರು ಇರುವುದರಿಂದಾಗಿ ಕೊಟ್ಟಿಗೆ ಗೊಬ್ಬರದ ಬರ ಈಗ ಆವರಿಸಿದೆ. ಬಿತ್ತನೆ ಸೇರಿದಂತೆ ಉಳಿಮೆ ಮಾಡಲು ಟ್ರ್ಯಾಕ್ಟರ್ ದೊರಕುತ್ತಿರುವುದರಿಂದ ಎತ್ತುಗಳ ಸಂಖ್ಯೆ ಇಳಿಮುಖವಾಗಿದೆ ಎಂದು ರೈತರು ತಿಪ್ಪೆಗೊಬ್ಬರದ ದರ ಏರಿಕೆಗೆ ಕಾರಣ ಕೊಡುತ್ತಾರೆ.

`ಕೊಟ್ಟಿಗೆಯೊಳಗೆ ದನಗಳ ಇಲ್ಲ, ಕೊಟ್ಟಿಗೆ ಗೊಬ್ಬರ ಹ್ಯಾಂಗ ಸಿಗತೈತ್ರಿ, ಅದ್ಕ ತಿಪ್ಪೆಗೊಬ್ಬರದ ಬೆಲೆ ಈಗ ಉಪ್ಪರಿಗೆ ಏರಿ ಕುಂತೈತೆ ಎಂದು ಭೀಮಣ್ಣ ಹೊಸಕಲ್ ಹೇಳುತ್ತಾರೆ.

ಗ್ರಾಮಗಳ ಸುತ್ತಮುತ್ತ ತಿಪ್ಪೆಗಳು ಕಾಣಿಸಿದರೂ ಅವುಗಳನ್ನು ಮಾರುವುದರ ಬದಲು ತಮ್ಮ ಜಮೀನುಗಳಿಗೆ ಬಳಕೆ ಮಾಡಿಕೊಳ್ಳುವ ರೈತರೆ ಹೆಚ್ಚು. ಜಾನುವಾರುಗಳನ್ನು ಹೊಂದಿರದ ರೈತರು ಅನಿವಾರ್ಯವಾಗಿ ತಿಪ್ಪೆಗೊಬ್ಬರ ಹುಡುಕುತ್ತಾ ಹೋಗಬೇಕು. ಕೆಲವೊಬ್ಬರು ಮಾರಿದರೂ ಅದರಲ್ಲಿ ಸಗಣಿಗಿಂತ ಹೆಚ್ಚು ಇತರೆ ವಸ್ತುಗಳು ತುಂಬಿಕೊಂಡಿರುತ್ತದೆ ಎಂದು ರೈತ ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.