ADVERTISEMENT

ಹನುಮಸಾಗರ: ಮಳೆಗಾಗಿ ಕಾಯುತ್ತಿರುವ ಹೆಸರು ಬೆಳೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 8:38 IST
Last Updated 2 ಜೂನ್ 2022, 8:38 IST
ಹನುಮಸಾಗರ ಸಮೀಪದ ಅಡವಿಭಾವಿ ಗ್ರಾಮದ ಜಮೀನಲ್ಲಿನ ಹೆಸರು ಬೆಳೆ
ಹನುಮಸಾಗರ ಸಮೀಪದ ಅಡವಿಭಾವಿ ಗ್ರಾಮದ ಜಮೀನಲ್ಲಿನ ಹೆಸರು ಬೆಳೆ   

ಹನುಮಸಾಗರ: ಪೂರ್ವ ಮುಂಗಾರಿ ನಲ್ಲಿ ಸುರಿದ ಅಲ್ಪ ಮಳೆಗೆ ಅಡವಿಭಾವಿ, ಹುಲಸಗೇರಿ, ಹನುಮನಾಳ, ಯರಿ ಗೋನಾಳ, ಹೂಲಗೇರಿ ವ್ಯಾಪ್ತಿಯ ಕಪ್ಪು ಜಮೀನಿನಲ್ಲಿ ಬಿತ್ತನೆಯಾದ ಹೆಸರು ಬಾಳೆಗಳು ಮಳೆಗಾಗಿ ಕಾಯುತ್ತಿವೆ.

ಅವಧಿ ಪೂರ್ವದಲ್ಲಿ ಬಿದ್ದ ಮಳೆಗೆ ಹಲವು ರೈತರು ಹೆಸರು ಬಿತ್ತನೆ ಮಾಡಿ ದರು. ಹಿಂಗಾರು ಅವಧಿಗೆ ಮತ್ತೊಂದು ಬೆಳೆ ಪಡೆಯಬಹುದು ಎಂಬ ಆಸೆಯಿಂದ ಬಿತ್ತನೆ ಮಾಡಿದ್ದರು. ಸದ್ಯ ಬೆಳೆಗಳು ಮೊಳಕೆ ಹಂತದಿಂದ ಮೇಲೆ ಬಂದಿದ್ದು, ತೇವಾಂಶದ ಅಗತ್ಯವಿದೆ.

ಹೆಸರು ಬೆಳೆ ಮೂರು ತಿಂಗಳಲ್ಲಿ ಫಸಲು ಬರುತ್ತದೆ. ಕಳೆದು ಎರಡು ವರ್ಷದಿಂದ ಬಿತ್ತನೆ ಮಾಡಿದರೂ ಬೆಳೆ ದಕ್ಕುತ್ತಿಲ್ಲ. ಈ ವರ್ಷ ಬೇಗನೆ ಮಳೆ ಬಂದ ಕಾರಣ ಬಿತ್ತನೆ ಮಾಡಿದ್ದೇವೆ. ಈಗ ಮಳೆಯಾದರೆ ಮಾತ್ರ ಬೆಳೆಯ ಮೇಲೆ ವಿಶ್ವಾಸ ಮೂಡುತ್ತದೆ. ಮಳೆ ಯಾಗದಿದ್ದರೆ ಮಾಡಿದ ಖರ್ಚು ವ್ಯರ್ಥವಾಗುತ್ತದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ದೋಟಿಹಾಳ ಹೇಳಿದರು.

ADVERTISEMENT

ಖರ್ಚಿಲ್ಲದೆ ಹೆಸರು ಬೆಳೆ ಕೈಹಿಡಿದರೆ ಮುಂದಿನ ಬೆಳೆಗಳ ಬಿತ್ತನೆಗೆ, ಜಮೀನು ಹದಗೊಳಿಸಲು ಒಂದಿಷ್ಟು ಹಣ ಸಿಗುತ್ತದೆ. ಉತ್ತಮ ಬೆಲೆಯೂ ದೊರಕುತ್ತದೆ. ಭೂಮಿಗೆ ಫಲವತ್ತತೆ ಲಭಿಸುತ್ತದೆ. ಒಂದು ಸಣ್ಣ ಪ್ರಮಾಣದಲ್ಲಿ ಮಳೆ ಬೇಕಾಗಿದೆ ಎಂದು ಹೂಲಗೇರಿಯ ರೈತ ಗುರಪ್ಪ ಮಡಿವಾಳರ ಅವರು ತಿಳಿಸಿದರು.

ಕೃಷಿ ಚಟುವಟಿಕೆ ಚುರುಕು
ತಾವರಗೇರಾ:
ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಮುಂಗಾರು ಹಂಗಾಮಿನ ಆರಂಭಿಕ ಮಳೆಗೆ ಹಲವು ಗ್ರಾಮಗಳಲ್ಲಿ ಜಮೀನುಗಳ ಹದ ಹಾಗೂ ಸ್ವಚ್ಛಗೊಳಿಸುವ ಕಾರ್ಯ ಬರದಿಂದ ಸಾಗಿದೆ. ಬಿತ್ತನೆ ಕಾರ್ಯಗಳಿಗೆ ಅಗತ್ಯವಾದ ರಂಟೆ, ಕುಂಟೆ, ಕೂರಿಗೆ, ನೊಗ, ಬುಕ್ಕಾದಂತಹ ಸಲಕರಣೆಗಳ ದುರಸ್ತಿ ಕೆಲಸವೂ ಶುರುವಾಗಿದೆ.

ಮುಂಗಾರು ಬೆಳೆಗಳಾದ ಸಜ್ಜೆ, ಎಳ್ಳು, ತೊಗರಿ, ಜೋಳ, ಸೂರ್ಯಕಾಂತಿ, ಅಲಸಂದಿ, ನವಣೆ, ಮಡಿಕೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಗೆ ಕೃಷಿಕರು ಸಿದ್ಧವಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.