ADVERTISEMENT

ಕೊಪ್ಪಳ: ಮನೋಹರ ಅವರಿಗೆ ವಾಯಸೇನಾ ಪದಕ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 5:07 IST
Last Updated 31 ಜನವರಿ 2024, 5:07 IST
ಮನೋಹರ ಭೀಮಸೇನ್ ರಾವ್‌
ಮನೋಹರ ಭೀಮಸೇನ್ ರಾವ್‌   

ಕೊಪ್ಪಳ: ಭಾರತೀಯ ವಾಯುಸೇನೆಯಲ್ಲಿ ವಿಂಗ್‌ ಕಮಾಂಡರ್‌ ಆಗಿರುವ ಮೂಲತಃ ಕೊಪ್ಪಳ ತಾಲ್ಲೂಕಿನ ತಿಗರಿ ಗ್ರಾಮದ ಮನೋಹರ ಭೀಮಸೇನರಾವ್‌ ಅವರಿಗೆ ವಾಯುಸೇನಾ ಪದಕ ಲಭಿಸಿದೆ.

ಗಣರಾಜ್ಯೋತ್ಸವದ ಮುನ್ನ ಕರ್ತವ್ಯದಲ್ಲಿ ಅಸಾಧಾರಣ ಸಾಮರ್ಥ್ಯ ತೋರಿದ ಕಾರಣಕ್ಕಾಗಿ ಈ ಪದಕ ನೀಡಲಾಗಿದೆ.

ಪ್ರಸ್ತುತ ಮಧ್ಯಪ್ರದೇಶದ ಗ್ವಾಲಿಯರ್‌ನ ಐಎಎಫ್ ಸ್ಟೇಷನ್‌ನಲ್ಲಿ ಗ್ರೌಂಡ್ ಕಂಟ್ರೋಲ್ ಅಪ್ರೋಚ್‌ ತಂಡದ ಕಮಾಂಡಿಂಗ್‌ ಅಧಿಕಾರಿಯಾಗಿರುವ ಅವರು ಜಪಾನ್ ಮತ್ತು ಥಾಯ್ಲೆಂಡ್ ಜೊತೆ ನಡೆದಿದ್ದ ಅಂತರರಾಷ್ಟ್ರೀಯ ಮಿಲಿಟರಿ ಸಹಕಾರಿ ತಾಲೀಮಿನಲ್ಲಿ ಅವರು ಭಾರತೀಯ ವಾಯುಸೇನೆ ಪ್ರತಿನಿಧಿಸಿದ್ದರು.

ADVERTISEMENT

ಮನೋಹರ ಅವರು ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಎಂಬಿಎ ಪದವಿ ಪಡೆದಿದ್ದಾರೆ. ವಾಯುಸೇನೆಯ ಆಡಳಿತ ಶಾಖೆಯಲ್ಲಿ ಮಿಲಿಟರಿ ಮತ್ತು ನಾಗರಿಕ ವಾಯುಸಂಚಾರ ನಿಯಂತ್ರಣದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.

ಪ್ರಸ್ತುತ ನಾಗಪುರದಲ್ಲಿ ನೆಲೆಸಿರುವ ಅವರು ದಿವಂಗತ ತಿಗರಿ ಭೀಮಸೇನರಾವ್‌ ಹಾಗೂ ಇಂದಿರಾರಾವ್‌ (ಶಾಂತಬಾಯಿ ಶಾನುಭೋಗ) ದಂಪತಿಯ ಪುತ್ರ. ವಾಯುಸೇನೆ ಕುಟುಂಬಗಳ ಕಲ್ಯಾಣ ಸಂಘದ ಸಕ್ರಿಯ ಸದಸ್ಯೆಯೂ ಆಗಿರುವ ಶಿಕ್ಷಕಿ ರಂಜೀತಾ ರಾವ್‌ ಇವರ ಪತ್ನಿ.

‘ನನ್ನ ತಂದೆ ಶಾನುಭೋಗ ವೆಂಕಟರಾವ್ ಅವರ ಅಳಿಯ ಮನೋಹರ ನಾಗಪುರದಲ್ಲಿ ನೆಲೆಸಿದ್ದು, ವಾಯುಸೇನೆಯಲ್ಲಿ ಈ ಸಾಧನೆ ಮಾಡಿದ್ದಕ್ಕೆ ಅತೀವ ಸಂತೋಷವಾಗಿದೆ. ಇದು ಅತ್ಯಂತ ಹೆಮ್ಮೆ ಪಡುವ ವಿಷಯ’ ಎಂದು ಇಲ್ಲಿನ ಕೋಟೆ ಪ್ರದೇಶದಲ್ಲಿ ನೆಲೆಸಿರುವ ವೆಂಕಟರಾವ್‌ ಅವರ ಪುತ್ರ ಗೋವಿಂದ ಕುಲಕರ್ಣಿ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.