ಕೊಪ್ಪಳ: ಬದುಕಿನುದ್ದಕ್ಕೂ ಅನುಭವಿಸಿದ ಅವಮಾನಗಳ ಯಾತನೆಯ ಬುತ್ತಿ ಕಟ್ಟಿಕೊಂಡು, ವೃತ್ತಿಯಲ್ಲಿ ಖಜಾನೆ ಅಧಿಕಾರಿಯಾಗಿ ‘ಲೆಕ್ಕ’ದ ಜೊತೆ ಸಾಹಿತ್ಯದಲ್ಲಿಯೂ ಪಕ್ವತೆ ಹೊಂದಿರುವ ಹಿರಿಯ ಲೇಖಕ ಎ.ಎಂ. ಮದರಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ ವಲಯದಲ್ಲಿ ಅಪಾರ ಸ್ನೇಹಬಳಗ ಹೊಂದಿರುವ ಮದರಿ ಅವರಿಗೆ ಅವರ ಹೆಸರು ಹಿಡಿದು ಗುರುತಿಸುವುದಕ್ಕಿಂತ ಅವರ ಏಕೈಕ ಪುಸ್ತಕ ಗೊಂದಲಿಗ್ಯಾ ಹೆಸರು ಹೇಳಿಬಿಟ್ಟರೆ ಲೇಖಕನ ಹೆಸರು ಸುಲಭವಾಗಿ ಗೊತ್ತಾಗಿಬಿಡುವಷ್ಟು ಖ್ಯಾತಿ ಅವರದ್ದು.
ಮದರಿ ಅವರು ಮೂಲತಃ ವಿಜಯಪುರ ಜಿಲ್ಲೆಯವರು. 1952ರಲ್ಲಿ ಸಿಂದಗಿ ತಾಲ್ಲೂಕಿನ ಮದರಿಯಲ್ಲಿ ಜನಿಸಿ ಅನೇಕ ಏಳುಬೀಳುಗಳ ನಡುವೆ, ಅವರಿವರಿಂದ ನೆರವು ಪಡೆದು ಬಿ.ಎಸ್‌ಸಿ, ಬಿ.ಇಡಿ ಪದವಿ ಪಡೆದರು. ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರಾದರೂ ಕರ್ನಾಟಕ ಟ್ರೇಜರಿ ಸರ್ವಿಸ್ ಪರೀಕ್ಷೆ ಉತ್ತೀರ್ಣರಾಗಿ ಜಿಲ್ಲಾ ಖಜಾನಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು.
ಮದರಿ ಅವರು ಹಿಂದೊಮ್ಮೆ ಅನೌಪಚಾರಿಕವಾಗಿ ಮಾತನಾಡುವಾಗ ’ಲೆಕ್ಕದ ಅಧಿಕಾರಿ ಬಳಿ ಯಾರು ಸಾಹಿತ್ಯ ಮಾತನಾಡುತ್ತಾರೆ. ಎಲ್ಲರಿಗೂ ಅವರ ಲೆಕ್ಕ ಪಕ್ಕವಾದರೆ ಸಾಕು ಎನ್ನುವಂಥ ಸ್ಥಿತಿ. ಇಂಥ ಕೆಲಸದ ನಡುವೆಯೂ ಅನೇಕ ಸಾಹಿತ್ಯಪ್ರೇಮಿಗಳು ಸ್ನೇಹಿತರಾದರು. ಸಾಹಿತ್ಯಾಸಕ್ತರು ಬಂದರೆ ಅವರ ಲೆಕ್ಕ ಬೇಗನೆ ಚುಕ್ತಾ ಆಗುತ್ತಿತ್ತು’ ಎಂದಿದ್ದರು.
ಮದರಿ ಅವರು 1993ರಲ್ಲಿ ಕೊಪ್ಪಳದಲ್ಲಿ ನಡೆದ 62ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿದ್ದರು. ಈಗ ಇಲ್ಲಿನ ಭಾಗ್ಯನಗರದಲ್ಲಿ ವಾಸವಾಗಿದ್ದಾರೆ. ವಿವಿಧ ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ. ಪ್ರಶಸ್ತಿಗಳನ್ನೂ ನೀಡಿವೆ. ಖಜಾನೆ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಅವರ ಖಾತೆಗೆ ಈಗ ’ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿಯ ಗರಿಯೂ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.