ADVERTISEMENT

ಕೊಪ್ಪಳ: ಅಂತರ್ಜಲ ಹೆಚ್ಚಿಸಲು ‘ಅಮೃತ ಸರೋವರ’

ಗ್ರಾಮ ಪಂಚಾಯ್ತಿ ಹಂತದಲ್ಲಿ ಹೂಳು ವಿಲೇವಾರಿಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 20:30 IST
Last Updated 6 ಜುಲೈ 2022, 20:30 IST
ಅಮೃತಸರೋವರ ಯೋಜನೆಯಡಿ ಅಭಿವೃದ್ಧಿಗೊಳ್ಳಲಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮುಧೋಳ ಕೆರೆಯ ನೋಟ
ಅಮೃತಸರೋವರ ಯೋಜನೆಯಡಿ ಅಭಿವೃದ್ಧಿಗೊಳ್ಳಲಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮುಧೋಳ ಕೆರೆಯ ನೋಟ   

ಕೊಪ್ಪಳ: ಭವಿಷ್ಯದಲ್ಲಿ ನೀರಿಗೆ ಎದುರಾಗುವ ಸಂಕಷ್ಟ ತಪ್ಪಿಸಲು ಜಿಲ್ಲಾ ಪಂಚಾಯ್ತಿ‘ಅಮೃತ ಸರೋವರ’ ಯೋಜನೆ ಜಾರಿಗೆ ತರಲು ಮುಂದಾಗಿದೆ.

ಜಿಲ್ಲೆಯ 93 ಗ್ರಾಮ ಪಂಚಾಯ್ತಿಗಳಲ್ಲಿ ಕೆರೆಗಳನ್ನು ಗುರುತಿಸಲಾಗಿದ್ದು, ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದಲೇ ‘ಅಮೃತ ಸರೋವರ’ ಕೆರೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ತಿಳಿಸಿದ್ದಾರೆ.

‘ಜಾಗತಿಕ ತಾಪಮಾನದಿಂದ ಜಲಮೂಲ ಬತ್ತಿ ಹೋಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಮತ್ತು ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಜಿಲ್ಲೆಯ 93 ಕೆರೆಗಳ ಅಭಿವೃದ್ಧಿಗೆ ಸೂಚಿಸಿತ್ತು. ಅದರಂತೆ ಈಗ ಸರ್ವೆ ಕಾರ್ಯ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆ. 15ರಂದು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಐದು ಕರೆಗಳಂತೆ 35 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಈ ಕಾರ್ಯ ಮಾಡುತ್ತಿರುವ ಕಾರಣ ‘ಅಮೃತ ಸರೋವರ‘ ಎಂದು ಈ ಕೆರೆಗಳನ್ನು ಘೋಷಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಟಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ADVERTISEMENT

ಅಮೃತ ಸರೋವರ ಪೋರ್ಟಲ್‌ನಲ್ಲಿ ಜಿಲ್ಲೆಯ ಒಟ್ಟು 93 ಕೆರೆಗಳ ಮಾಹಿತಿ ದಾಖಲಿಸಲಾಗಿದೆ.

‘ಕೆರೆಯ ಹೂಳನ್ನು ವೈಜ್ಞಾನಿಕವಾಗಿ ತೆಗೆದು, ಅದನ್ನು ಗ್ರಾಮ ಪಂಚಾಯ್ತಿ ಹಂತದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಗೂಗಲ್ ಅರ್ಥ್‌ ಮತ್ತು ದಿಶಾಂಕ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಕೆರೆಗೆ ಸರಾಗವಾಗಿ ನೀರು ಬರುವ ಪೋಷಕ ಕಾಲುವೆ ಹಾಗೂ ಹಳ್ಳಗಳನ್ನು ಗುರುತಿಸಿ ಅವುಗಳನ್ನು ದುರಸ್ತಿಗೊಳಿಸಿ ಹೂಳು ತೆಗೆಯಲಾಗುತ್ತಿದೆ‘ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಬಿ. ಫೌಜಿಯಾ ತರನ್ನುಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.