ಕನಕಗಿರಿ: ಪಟ್ಟಣ ಹಾಗೂ ಕಾರಟಗಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅನುಕೂಲ ಕಲ್ಪಿಸಲು ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ₹204 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಯೂ ಲಭಿಸಿದೆ.
ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಈ ಕಾಮಗಾರಿ ನಡೆಯಲಿದ್ದು, ತುಂಗಭದ್ರಾ ಜಲಾಶಯದಿಂದ ಕನಕಗಿರಿ ಹಾಗೂ ಕಾರಟಗಿ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ.
ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೆತ್ತಿಕೊಂಡಿದ್ದು, ಬೆಂಗಳೂರಿನ ಅಮೃತ ಕನ್‌ಸ್ಟ್ರಕ್ಷನ್ ಹಾಗೂ ಜಿ.ವಿ. ವಿತ್ ಮೆ. ಇನ್ಪ್ರಾಕಾನ್ ಸ್ಟೆಕ್ಟರ್ ಕಂಪನಿ ಗುತ್ತಿಗೆ ಪಡೆದುಕೊಂಡಿವೆ. ಸಮೀಪದ ಬಂಕಾಪುರ ಗ್ರಾಮದ ಸೀಮೆಯಲ್ಲಿ ಬೃಹತ್ ಪ್ರಮಾಣದ ನೀರು ಶುದ್ದೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ ಆನ್‌ಲೈನ್ ಮೂಲಕವೇ ನೀರು ಪೂರೈಕೆಯ ನಿರ್ವಹಣೆ ಮೇಲೆ ಕಣ್ಗಾವಲು ವಹಿಸುವ ವ್ಯವಸ್ಥೆ ಮಾಡಲಾಗಿದೆ.
ಜಲಾಶಯದಿಂದ ನೀರನ್ನು 42.89 ಕಿ.ಮೀ ವರೆಗೆ 559 ಮಿ.ಮೀ ವ್ಯಾಸದ ಎಂ.ಎಸ್ ಕಚ್ಚಾ ನೀರಿನ ಏರು ಕೊಳವೆ ಮೂಲಕ ಶುದ್ದೀಕರಣ ಘಟಕಕ್ಕೆ ಪೊರೈಕೆ ಮಾಡಿ ಶುದ್ದೀಕರಿಸಿದ ನೀರನ್ನು ಪಟ್ಟಣದ ತೊಂಡೆತೇವರಪ್ಪ ದೇವಸ್ಥಾನದ ಪರಿಸರದಲ್ಲಿರುವ ಸಿಂಗ್ ಎಂಬುವವರ ಲೇಔಟ್ ಸಿಎ ನಿವೇಶನದಲ್ಲಿ ಹಾಗೂ ಸ್ವಾಮೇರ ಗದ್ದಿಯ ಜಾಗದಲ್ಲಿ ತಲಾ 10 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ನೀರಿನ ಘಟಕದಲ್ಲಿ ಸಂಗ್ರಹಿಸಿ ಪೂರೈಕೆ ಮಾಡುವ ಯೋಜನೆ ಇದಾಗಿದೆ. ಇದರಿಂದಾಗಿ 6050 ಮನೆಗಳ ನಲ್ಲಿಗಳ ಮೂಲಕ ನೀರು ಪೂರೈಕೆಯಾಗಲಿದೆ ಎಂದು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಸುಖಮುನಿ ನಾಯಕ 'ಪ್ರಜಾವಾಣಿ'ಗೆ ತಿಳಿಸಿದರು.
ಪಟ್ಟಣದಲ್ಲಿ ಸದ್ಯ 20,869 ಜನರಿದ್ದು ಮುಂದಿನ 30 ವರ್ಷಗಳಲ್ಲಿ 31,333ರಷ್ಟು ಆಗಲಿದೆ ಎನ್ನುವ ಅಂದಾಜು ಇದೆ. ಪ್ರತಿಯೊಬ್ಬ ವ್ಯಕ್ತಿಗೆ 135 ಎಲ್‌ಪಿಸಿಡಿ ಪ್ರಮಾಣದಂತೆ ಪರಿಗಣಿಸಿ ಯೋಜನೆ ರೂಪಿಸಲಾಗಿದೆ. ₹204 ಕೋಟಿ ವೆಚ್ಚದಲ್ಲಿ ಜಲಾಶಯದಲ್ಲಿ ಕಾಮನ್ ಹೌಸಿಂಗ್ ಚೇಂಬರ್, ಸ್ಟೀಲಿಂಗ್ ಬಸೀನ್, ಕಾಫರ್ ಡ್ಯಾಮ್, ಆರ್ ಸಿಸಿ ಪುಟ್ಟಬ್ರಿಡ್ಜ್ , ನೀರಿನ ಪಂಪ್ ಅಳವಡಿಸಸಬೇಕಿದೆ. ನೀರು ಪೊರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು 33 ಕೆ.ವಿ. ಸಾಮರ್ಥ್ಯದ ಎಕ್ಸ್‌ಪ್ರೆಸ್ ಫೀಡ್ ಅಳವಡಿಸಲಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಕೊಳವೆ ಮಾರ್ಗ ಅಳವಡಿಸುವೆ ಕಾರ್ಯ ಆರಂಭವಾಗಿದೆ.
ಕನಕಗಿರಿ ಮತ್ತು ಕಾರಟಗಿ ತಾಲ್ಲೂಕು ಕೇಂದ್ರಗಳಾದ ಬಳಿಕ ಜನಸಂಖ್ಯೆ ಹೆಚ್ಚಾತುತ್ತಲೇ ಇದೆ. ಮುಂದೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಈ ಯೋಜನೆ ರೂಪಿಸಲಾಗಿದೆ.ಶಿವರಾಜ ತಂಗಡಗಿ , ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.