ಗಂಗಾವತಿ: ‘ಆನೆಗೊಂದಿ ಪ್ರಾಚೀನ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ, ಪರಂಪರೆಯ ನೆಲೆ. ಇಲ್ಲಿನ ಪ್ರಕೃತಿ, ಕುರುಚಲು ಕಲ್ಲು, ಬೆಟ್ಟ, ನಿಸರ್ಗ ರಾಜ್ಯದಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಒಂದರ್ಥದಲ್ಲಿ ಆನೆಗೊಂದಿಯನ್ನು ಹೈದ್ರಾಬಾದ್ ಕರ್ನಾಟಕದ ಕಾಶ್ಮೀರ ಎನ್ನಬಹುದು’ ಎಂದು ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಪಾರ್ಕಿಂಗ್ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಶುಕ್ರವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ ನಡೆದ ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ಪ್ರವಾಸೋದ್ಯಮ ಅಭಿವೃದ್ಧಿ ಭಾಗವಾಗಿ ಹೊಟೇಲ್, ರೆಸಾರ್ಟ್ ಸೇರಿ ಎಲ್ಲ ಉದ್ಯಮಗಳು ಹಂಪಿ, ಹೊಸಪೇಟೆಗೆ ಮಾತ್ರ ಸೀಮಿತವಾಗಿವೆ. ಆನೆಗೊಂದಿ ಭಾಗಕ್ಕೆ ಯಾವ ಅವಕಾಶಗಳೂ ಸಿಗುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ತುಂಬ ಕಾಣುತ್ತಿದೆ. ಹಲವು ವರ್ಷಗಳಿಂದ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ಹಂಪಿಗೆ ಬೆಣ್ಣೆ, ಆನೆಗೊಂದಿಗೆ ಸುಣ್ಣ ಎಂಬತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಂಜನಾದ್ರಿ, ಹಿರೇಬೆಣಕಲ್ ಸಮಾಧಿ, ಕಮ್ಮಟ ದುರ್ಗಾ, ಬಹದ್ದೂರಬಂಡಿ, ಕೊಪ್ಪಳ ಕೋಟೆ, ಪಂಪಾ ಸರೋವರ, ಋಷಿಮುಖ ಪರ್ವತ ಸೇರಿ ರಾಮಾಯಣ ಕಾಲದ ದೇವಸ್ಥಾನ, ಮಂಟಪ, ಗವಿಚಿತ್ರ, ಶಾಸನಗಳಿವೆ. ಈ ಇತಿಹಾಸವನ್ನ ಮುಂದಿನ ಪೀಳಿಗೆಗೆ ತಿಳಿಸುವ ಜೊತೆಗೆ ಐತಿಹಸಿಕ ಸ್ಥಳಗಳ ರಕ್ಷಣೆಗೆ ಸರ್ಕಾರ, ಇಲಾಖೆಗಳು ಮುಂದಾಗಬೇಕು’ ಎಂದರು.
‘ಹಿರೇಬೆಣಕಲ್ ಮೊರೆರ ಬೆಟ್ಟದಲ್ಲಿ 8 ರೀತಿಯ ಸಮಾಧಿಗಳಿವೆ. ಜಗತ್ತಿನಲ್ಲಿ ಎಲ್ಲಿ ಇಲ್ಲದ ಕುದುರೆ ಕಲ್ಲು ತಂತ್ರಜ್ಞಾನ ನಮ್ಮಲ್ಲಿದೆ. ಸ್ತ್ರಿಯರನ್ನು ಸಹೋದರಿ ಭಾವದಿಂದ ಕಂಡ ಜಗತ್ತಿನ ಏಕೈಕ ವೀರ ಈ ಕುಮಾರರಾಮ. ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಭಾಗ ಉಳಿಸುವ ವ್ಯವಧಾನ ಯಾರಿಗೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ‘ಆನೆಗೊಂದಿ ಅತ್ಯಂತ ಪ್ರಾಕೃತಿಕ, ಸುಂದರ ಮತ್ತು ಧಾರ್ಮಿಕ ಸ್ಥಳಗಳ ನೆಲೆ. ನಿಜವಾದ ಸ್ವರ್ಗ ಕಂಡು ಬರುವುದು ಇಲ್ಲೇ, ಹಂಪಿಯಲ್ಲಲ್ಲ. ದೇಶದಲ್ಲಿ ಹಿಂದೂತ್ವ ಒಳಗೊಂಡು ರಚನೆಯಾದ ಯಾವುದಾದರೂ ಸಾಮ್ರಾಜ್ಯ ಇದೆಯೆಂದರೇ, ಅದು ವಿಜಯನಗರ ಸಾಮ್ರಾಜ್ಯ ಮಾತ್ರ. ಇಲ್ಲಿ ಜನಿಸಿದವರು ಪುಣ್ಯವಂತರು. ಕರ್ನಾಟಕದಂತ ಸುಂದರ ರಾಜ್ಯ ಈ ದೇಶದಲ್ಲಿ ಎಲ್ಲಿಯೂ ನೋಡಲು ಸಾಧ್ಯವಿಲ್ಲ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿದರು.
ಶಾಸಕ ಜಿ.ಜನಾರ್ದನರೆಡ್ಡಿ ಪತ್ನಿ ಅರುಣಾಲಕ್ಷ್ಮಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು, ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ತಹಶೀಲ್ದಾರ್ ನಾಗರಾಜ. ಯು, ಕನಕಗಿರಿ ತಹಶೀಲ್ದಾರ್ ವಿಶ್ವನಾಥ ಮುರುಡಿ, ಗಂಗಾವತಿ ತಾ.ಪಂ ಇಒ ರಾಮರೆಡ್ಡಿ ಪಾಟೀಲ, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ, ಡಾ.ಶಿವಕುಮಾರ, ಪವನಕುಮಾರ ಸೇರಿ ತಾಲ್ಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಆನೆಗೊಂದಿ ಭಾಗದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಏನೆಲ್ಲ ಅವಕಾಶಗಳಿವೆ ಅವುಗಳನ್ನು ಮಾಡುತ್ತೆವೆ. ಇದರಿಂದ ಸ್ಥಳೀಯರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ದೊರೆಯುವಂತೆ ಮಾಡುತ್ತೇವೆ. ಇಲ್ಲಿ ಸುಂದರ ವಾತವರಣವಿದ್ದು ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಿದ್ದೇವೆಸುರೇಶ್ ಬಿ.ಇಟ್ನಾಳ ಜಿಲ್ಲಾಧಿಕಾರಿ
ಪ್ಲಾಗ್ ರನ್ ಪ್ಲಾಸ್ಟಿಕ್ ಬಳಕೆ ಮುಕ್ತ ಜಾಗೃತಿ ಜಾಥಾ ಪ್ರವಾಸೋದ್ಯಮ ಅಭಿವೃದ್ಧಿ ಐತಿಹಾಸಿಕ ಸ್ಥಳಗಳ ರಕ್ಷಣೆ ಪ್ಲಾಸ್ಟಿಕ್ ಬಳಕೆ ಮಾಡದ ಜಾಗೃತಿ ಮೂಡಿಸಲು ಶುಕ್ರವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆನೆಗೊಂದಿ ಗಗನ ಮಹಲ್‌ನಿಂದ ಅಂಜನಾದ್ರಿ ಬೆಟ್ಟದವರೆಗೆ ಫ್ಲಾಗ್ ರನ್ ಮಾಡಲಾಯಿತು. ಬೆಳಿಗ್ಗೆ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾಮಸ್ಥರು ಪರಿಸರ ಪ್ರೇಮಿಗಳು ಚಾರಣ ಬಳಗದ ಸದಸ್ಯರು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಟೀ-ಶರ್ಟ್ ಹಾಕಿಕೊಂಡು ಅಂಜನಾದ್ರಿ ಬೆಟ್ಟದವರೆಗೆ ಫ್ಲಾಗ್ ರನ್ ಮಾಡಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು. ಜಿಲ್ಲಾಧಿಕಾರಿ ಸುರೇಶ ಇಟ್ನಾಳ ರನ್‌ಗೆ ಚಾಲನೆ ನೀಡಿದರು. ಆನೆಗೊಂದಿಯಿಂದ ಓಟ ಆರಂಭಿಸಿ ದುರ್ಗಾದೇವಿ ದೇವಸ್ಥಾನದ ರಸ್ತೆ ಬಳಿ ಆಡಳಿತಾಧಿಕಾರಿ ರಾಜನ್ನಸ್ವಾಮಿ ಅವರಿಂದ ಸನ್ಮಾನ ಸ್ವೀಕರಿಸಿ ಚಿಕ್ಕರಾಂಪುರವರೆಗೆ ಓಡಿದರು. ರನ್‌ನಲ್ಲಿ ಜಿ.ಪಂ ಸಿಇಒ ವರ್ಣಿತ್ ನೇಗಿ ಲಿವ್ ವಿತ್ ಹುಮಾನಿಟಿ ಕಿಷ್ಕಿಂದ ಚಾರಣ ಬಳಗ ಗೋ ಗ್ರೀನ್ ಗಂಗಾವತಿ ಚಾರಣ ಬಳಗ ಸೇರಿ ಪರಿಸರ ಪ್ರೇಮಿಗಳು ಆನೆಗೊಂದಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.