ADVERTISEMENT

ಆನೆಗುಂದಿಯಲ್ಲಿ ಹಬ್ಬದ ಸಂಭ್ರಮ: ಉತ್ಸವಕ್ಕೆ ಸಜ್ಜು

ಎರಡು ದಿನಗಳ ಕಾಲ ನಡೆಯುವ ಉತ್ಸವ

ಶಿವಕುಮಾರ್ ಕೆ
Published 8 ಜನವರಿ 2020, 19:45 IST
Last Updated 8 ಜನವರಿ 2020, 19:45 IST
ಗಗನ್ ಮಹಲ್‌ ಮಾದರಿಯಲ್ಲಿ ಕೃಷ್ಣದೇವರಾಯ ವೇದಿಕೆಯನ್ನು ನಿರ್ಮಾಣ ಮಾಡಿರುವುದು
ಗಗನ್ ಮಹಲ್‌ ಮಾದರಿಯಲ್ಲಿ ಕೃಷ್ಣದೇವರಾಯ ವೇದಿಕೆಯನ್ನು ನಿರ್ಮಾಣ ಮಾಡಿರುವುದು   
""

ಗಂಗಾವತಿ: ಇತಿಹಾಸ ಪ್ರಸಿದ್ದಿ ಆನೆಗೊಂದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗುರುವಾರ ತಾಲ್ಲೂಕಿನ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ಚಾಲನೆ ದೊರೆಯಲಿದೆ.

ದುರ್ಗಾದೇವಿ ಬೆಟ್ಟದಲ್ಲಿ ದುರ್ಗಾದೇವಿಗೆ ಬೆಳಗ್ಗೆ 9 ಗಂಟೆಗೆ ಶಾಸಕ ಪರಣ್ಣ ಮುನವಳ್ಳಿ ಅವರು ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ಉತ್ಸವಕ್ಕೆ ಚಾಲನೆ ನೀಡುವರು. ಬಳಿಕ ದೇವಸ್ಥಾನದಿಂದ ವಿವಿಧ ಕಲಾತಂಡಗಳ ಭವ್ಯ ಮೆರವಣಿಗೆ ಆನೆಗೊಂದಿಯ ಗಗನಮಹಲ್‌ ವರೆಗೂ ನಡೆಯಲಿದೆ.

ಒಂದು ತಿಂಗಳಿಂದ ಆನೆಗೊಂದಿ ಉತ್ಸವಕ್ಕೆ ಜಿಲ್ಲಾಡಳಿತ ತಯಾರಿ ನಡೆಸಿದ್ದು, ಸಕಲ ಸಿದ್ದತೆಗಳು ಭರದಿಂದ ಸಾಗಿವೆ. ಕಳೆದ ಒಂದು ವಾರದಿಂದ ಆನೆಗೊಂದಿಯಲ್ಲಿ ವಾಲಿಬಾಲ್‌, ಕಬಡ್ಡಿ, ಬಾಲ್‌ ಬ್ಯಾಡ್ಮಿಂಟನ್, ಕುಸ್ತಿ, ಸೈಕ್ಲಿಂಗ್‌ ರೇಸ್‌, ರಂಗೋಲಿ ಸ್ಪರ್ಧೆ, ಕೆಸರುಗದ್ದೆ ಓಟ, ಹಗ್ಗಜಗ್ಗಾಟ ಸೇರಿದಂತೆ ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸಲಾಯಿತು.

ADVERTISEMENT

ಉತ್ಸವಕ್ಕೆ ಎರಡು ವೇದಿಕೆ ಸಜ್ಜು: ಉತ್ಸವದ ನಿಮಿತ್ತ ಆನೆಗೊಂದಿ ಎರಡು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಆನೆಗೊಂದಿಯ ತಳವಾರ ಘಟ್ಟಕ್ಕೆ ತೆರಳುವ ಮಾರ್ಗದಲ್ಲಿ ಬೃಹತ್‌ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ಶ್ರೀ ಕೃಷ್ಣದೇವರಾಯ ವೇದಿಕೆ ಎಂದು ನಾಮಕರಣ ಮಾಡಲಾಗಿದೆ. ವೇದಿಕೆಯಲ್ಲಿ ವಿಐಪಿ, ವಿವಿಐಪಿ ಸೇರಿದಂತೆ ಗಣ್ಯರಿಗೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಕುಳಿತುಕೊಳ್ಳಲು 8 ಸಾವಿರಕ್ಕೂ ಹೆಚ್ಚು ಆಸನಗಳನ್ನು ವೇದಿಕೆ ಮುಂಭಾಗದಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಜೊತೆಗೆ ವಿಶಾಲವಾದ ಮೈದಾನವಿರುವುದರಿಂದ ನಿಂತು ಕೂಂಡು ಕಾರ್ಯಕ್ರಮವನ್ನು ವೀಕ್ಷಣೆ ಮಾಡುವವರಿಗೆ, ವೇದಿಕೆ ಅಲ್ಲಲ್ಲಿ ಬೃಹತ್‌ ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗಿದೆ. ವೇದಿಕೆಯ ಬಲಭಾಗದಲ್ಲಿ ಕಲಾವಿದರಿಗೆ ರೂಮ್‌ ಗಳ ವ್ಯವಸ್ಥೆ ಮಾಡಲಾಗಿದೆ. ಎಡಭಾಗದಲ್ಲಿ ಮಾಧ್ಯಮ ಕೇಂದ್ರ, ವಿವಿಧ ವಸ್ತುಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗಿದೆ. ಸುತ್ತಲ್ಲೂ ಇರುವ ಬೆಟ್ಟ ಗುಡ್ಡಗಳಿಗೆ ಆಕರ್ಷಕ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿದ್ದು, ಕಲ್ಲುಗಳಿಗೆ ಜೀವಕಳೆ ಬಂದಂತಾಗಿದೆ.

ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರಣ ವೇದಿಕೆ: ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರಣ್ಯ ಎರಡನೇ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಈ ವೇದಿಕೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಣೆ ಮಾಡಲು ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಆನೆಗೊಂದಿ ರಸ್ತೆಗಳು ಸಿಂಗಾರ: ಇನ್ನು, ಆನೆಗೊಂದಿಗೆ ತಲುಪುವ ಎಲ್ಲಾ ರಸ್ತೆಗಳನ್ನು ಹಾಗೂ ಸ್ಮಾರಕಗಳನ್ನು ತಳಿರು-ತೋರಣ ಹೂ, ಬಾಳೆಗೊನೆಗಳಿಂದ ಸಿಂಗಾರಗೊಳಿಸಲಾಗಿದೆ. ಇನ್ನು, ಬಾನಂಗಳದಲ್ಲಿ ಹಾರಿಬಿಟ್ಟಿರುವ ಬಲೂನುಗಳು ಕಲಾಸಕ್ತರನ್ನು ಉತ್ಸವಕ್ಕೆ ಕೈಬೀಸಿ ಕರೆಯುತ್ತಿವೆ.

ಆಗಸದಿಂದ ಆನೆಗೊಂದಿ: ಈ ಭಾರಿ ಉತ್ಸವದಲ್ಲಿ ಜಿಲ್ಲಾಡಳಿತವು ಆಗಸದಿಂದ ಆನೆಗೊಂದಿ ನೋಡುವ ಭಾಗ್ಯವನ್ನು ಸಾರ್ವಜನಿಕರಿಗೆ ಕಲ್ಪಿಸಿದೆ. ಖಾಸಗಿ ಕಂಪನಿಯವರು ಆನೆಗೊಂದಿ ಐತಿಹಾಸಿಕ ಸ್ಥಳವನ್ನು ಹೆಲಿಕ್ಯಾಪ್ಟರ್‌ನಲ್ಲಿ ತೋರಿಸಲಿದ್ದು, 8 ನಿಮಿಷಕ್ಕೆ ₹ 2,800 ಟಿಕೆಟ್‌ ದರ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.