ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ: ಸಚಿವ ಹಾಲಪ್ಪ ಆಚಾರ್‌

ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್‌

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 13:43 IST
Last Updated 7 ಸೆಪ್ಟೆಂಬರ್ 2021, 13:43 IST
ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ತೋಟಗಾರಿಕೆ ಇಲಾಖೆಯ ಪೌಷ್ಟಿಕ ತೋಟವನ್ನು ವೀಕ್ಷಿಸಿದರು
ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ತೋಟಗಾರಿಕೆ ಇಲಾಖೆಯ ಪೌಷ್ಟಿಕ ತೋಟವನ್ನು ವೀಕ್ಷಿಸಿದರು   

ಕೊಪ್ಪಳ: ‘ಪೋಷಣಾ ಹಾಗೂ ಮಾತೃ ವಂದನಾ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗ ಸಕಾಲಕ್ಕೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಬಸಪ್ಪ ಆಚಾರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹ ಮತ್ತು ಶಿಶು ಪಾಲನಾ ಕೇಂದ್ರ ಹಾಗೂ ಮಹಿಳಾ ವಿಶ್ರಾಂತಿ ಗೃಹ ಉದ್ಘಾಟಿಸಿ ಅವರು ಮಾತನಾಡಿದರು.

ಒಂದನೇ ವಾರದಲ್ಲಿ ಪೌಷ್ಟಿಕ ಸಸಿಗಳ ನೆಡುವ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕಾಂಶ ಹೊಂದಿದ ತರಕಾರಿ, ಹಣ್ಣುಗಳನ್ನು ಯಾವ ರೀತಿ ಬೆಳೆಯಬಹುದು ಎನ್ನುವ ಬಗ್ಗೆ ತೋಟಗಾರಿಕೆ ಇಲಾಖೆಯ ಮಾದರಿ ಕೈತೋಟದ ನಕ್ಷೆ ಪ್ರದರ್ಶನದಲ್ಲಿ ತೋರಿಸಿದ್ದು ಸಂತಸ. ಈ ಕಾರ್ಯಕ್ರಮಕ್ಕೆ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯವರು ಸಹಕರಿಸಬೇಕು ಎಂದರು.

ADVERTISEMENT

ಎರಡನೇ ವಾರದಲ್ಲಿ ಪೌಷ್ಟಿಕತೆಗಾಗಿ ವಿವಿಧ ಚಟುವಟಿಕೆ ಮತ್ತು ಆಯುಷ್ ವೈದ್ಯ ಮಾಹಿತಿ ಹಂಚಿಕೊಳ್ಳುವುದು. ಈ ನಿಟ್ಟಿನಲ್ಲಿ ಗರ್ಭಿಣಿಯರು, ಬಾಣಂತಿಯರು, ಪ್ರಾಯಪೂರ್ವ ಬಾಲಕಿಯರಿಗೆ ಮಾನಸಿಕ ಮತ್ತು ದೈಹಿಕವಾಗಿ ಸಧೃಢಗೊಳ್ಳಲು ನಿಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.

ಮೂರನೇ ವಾರದಲ್ಲಿ ಜಿಲ್ಲಾ, ತಾಲ್ಲೂಕುಗಳಲ್ಲಿ ಅಪೌಷ್ಟಿಕ ನಿವಾರಣೆಗಾಗಿ ಪ್ರಾದೇಶಿಕ ಪೌಷ್ಟಿಕ ಕಿಟ್‌ಗಳನ್ನು ಇಲಾಖೆಗಳಿಂದ, ದಾನಿಗಳಿಂದ, ಸಂಘ-ಸಂಸ್ಥೆಗಳಿಂದ ವಿತರಣೆ ಮಾಡುವ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೊನೆಯ ವಾರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸುವ ಮತ್ತು ಪೌಷ್ಟಿಕಆಹಾರವನ್ನು ವಿತರಣೆ ಮಾಡುವ ವಿಶೇಷ ಅಭಿಯಾನದಡಿಯಲ್ಲಿ ಅಪೌಷ್ಟಿಕ ಮಕ್ಕಳ ಕುರಿತು ಸಮೀಕ್ಷೆ ಮಾಡಿ, ಮಗುವಿಗೆ ಸಮರ್ಪಕವಾಗಿ ಪೂರೈಸಬೇಕು ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಸ್ವಂತ ಮಕ್ಕಳಂತೆ ಪೋಷಿಸಬೇಕು. ಏಕೆಂದರೆ ಇಡೀ ದಿನ ಮಗುವಿನ ಆರೋಗ್ಯ, ಚಟುವಟಿಕೆಯ ನಿರ್ವಹಣೆ ನಿಮ್ಮ ಹೊಣೆಯಾಗಿರುತ್ತದೆ‘ ಎಂದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ಭೀಮಣ್ಣ ತಳ್ಳಿಕೇರಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್,ಸಿಸಿಒ ಬಿ. ಫೌಜಿಯಾ ತರನ್ನುಮ್, ಎಸ್‌ಪಿ ಟಿ.ಶ್ರೀಧರ, ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ಹೇಮಂತ ಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಮಳಿಗೆಗಳಿಗೆ ಚಾಲನೆ: ಸನ್ಮಾನ

ಸೆಲ್ಫಿ ಕ್ಯಾಂಪೇನ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ, ಪೌಷ್ಟಿಕ ಕೈತೋಟ, ಕೋವಿಡ್ ಲಸಿಕಾ ಅಭಿಯಾನ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು.

ಉತ್ತಮ ಕೈತೋಟ ನಿರ್ಮಿಸಿದ ಹಾಗೂ ತೀವ್ರ ಅಪೌಷ್ಟಿಕ ಮಕ್ಕಳಿಂದ ಸಾಮಾನ್ಯ ಮಕ್ಕಳಿಗೆ ಬದಲಾವಣೆ ತಂದ ಅಂಗನವಾಡಿ ಕಾರ್ಯಕರ್ತರಿಗೆ ಪ್ರಶಸ್ತಿ, ಹೆಸರು ಕಾಳಿನಿಂದ ತಯಾರಿಸಿದ ಆಹಾರ ಪದಾರ್ಥ ಅಡುಗೆ ಸ್ಪರ್ಧೆ ವಿಜೇತರಿಗೆ ಮತ್ತು ರಂಗೋಲಿ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ಪಿಎಂಎಂವಿವೈ ಯೋಜನೆಯಡಿ ಸಾಧನೆ ಮಾಡಿದ ಮೇಲ್ವಿಚಾರಕಿಯರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.