ADVERTISEMENT

ಅಂಜನಾದ್ರಿ; ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲು ನೀಲನಕ್ಷೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 4:16 IST
Last Updated 14 ಜೂನ್ 2022, 4:16 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ   

ಗಂಗಾವತಿ (ಕೊಪ್ಪಳ): ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ನೀಲನಕ್ಷೆ ರೂಪಿಸಿದ್ದು, ಅನುಮೋದನೆಗಾಗಿ ಮುಖ್ಯಮಂತ್ರಿಗಳ ಜತೆ ನಡೆಯುವ ಸಭೆಯಲ್ಲಿ ಪ್ರಸ್ತಾವ ಸಲ್ಲಿಸಲು ನಿರ್ಧರಿಸಿದೆ.

ಹನುಮನ ಜನ್ಮಸ್ಥಳದ ಬಗ್ಗೆ ಈಗ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಮೂಲ ರಾಮಾಯಣ, ಪುರಾಣಗಳು, ಇತರೆ ಪರಾವೆಗಳನ್ನು ಅಧ್ಯಯನ ಮಾಡಿದ ಸ್ಥಳೀಯ ಇತಿಹಾಸ ತಜ್ಞರು, ಅರ್ಚಕರು ಅಂಜನಾದ್ರಿಯೇ ಹನುಮನ ಜನ್ಮಸ್ಥಳವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ₹120 ಕೋಟಿ ಅನುದಾನ ಮೀಸಲಿಟ್ಟಿದೆ. ಜತೆಗೆ ಹನುಮನ ಜನ್ಮ ಸ್ಥಳದ ವಿವಾದಕ್ಕೆ ತೆರೆ ಎಳೆಯಲು ಜೂ.15ರಂದು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳ ಜತೆ ಸಭೆ ನಡೆಯಲಿದೆ. ಅಭಿವೃದ್ಧಿಯ ಸ್ಥಳಗಳನ್ನು ಗುರುತಿಸಲು ಈ ನಕ್ಷೆ ಸಹಕಾರಿ ಆಗಲಿದೆ. ಇದರಲ್ಲಿ ಭೂಮಿ, ಸರ್ವೆ ನಂಬರ್, ಕಾಮಗಾರಿ, ರಸ್ತೆ, ಸರ್ಕಾರಿ ಸ್ಥಳದ ಮಾಹಿತಿ ಇದೆ.

ADVERTISEMENT

ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ವಾಹನ ನಿಲ್ದಾಣ ಸ್ಥಳ, 600 ಕೊಠಡಿಗಳ ಪ್ರವಾಸಿ ಮಂದಿರ, ಅತಿಥಿ ಗೃಹ, ಸಮುದಾಯ ಭವನ, ಸಿಬ್ಬಂದಿ, ವಸತಿ ಗೃಹ, ಊಟದ ಮತ್ತು ಅಡುಗೆ ಕೋಣೆಗಳು, ಶಾಪಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣೆ ಪಥ, ದೇವಾಲಯ ನವೀಕರಣ, ದೇವಸ್ಥಾನದ ಮುಂಭಾಗದ ರಸ್ತೆ ವಿಸ್ತರಣೆ ಸೇರಿದಂತೆ ಒಟ್ಟು 28 ಯೋಜನೆಗಳ ಪ್ರಸ್ತಾವ ಸಿದ್ಧಪಡಿಸಲಾಗಿದೆ.

ನೀಲನಕ್ಷೆಯ ಅನ್ವಯ ಅಗತ್ಯ ಸೌಕರ್ಯ ಕಲ್ಪಿಸಲು ಅಂಜನಾದ್ರಿ ಅಕ್ಕ ಪಕ್ಕದ ಚಿಕ್ಕರಾಂಪುರ, ಹನುಮನಹಳ್ಳಿ ಭಾಗದಲ್ಲಿ ಸರ್ಕಾರದ ಒಟ್ಟು 60 ಎಕರೆ ಭೂಮಿ ಅವಶ್ಯಕತೆ ಇದೆ.

‘ಪ್ರತಿ ಎಕರೆಗೆ ₹ 70 ಲಕ್ಷ ನೀಡಿ’

ಗಂಗಾವತಿ: ಅಂಜನಾದ್ರಿ ದೇವಸ್ಥಾನದಲ್ಲಿ ಸೋಮವಾರ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಜಿಲ್ಲಾ ಉಸ್ತವಾರಿ ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಸಚಿವ ಆನಂದ್ ಸಿಂಗ್ ಮಾತನಾಡಿ, ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ‌ ₹120 ಕೋಟಿ ಮೀಸಲಿರಿಸಿದೆ. ಜಿಲ್ಲಾಡಳಿತದ ನೀಲನಕ್ಷೆ ಕೇವಲ ಪ್ರಸ್ತಾವನೆಯೇ ಅಂತಿಮವಲ್ಲ. ಜೂ.15ರಂದು ಮುಖ್ಯಮಂತ್ರಿ, ಶಾಸಕರು, ಹಂಪಿ ಪ್ರಾಧಿಕಾರ, ಪ್ರವಾಸೋದ್ಯಮ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ಇಲ್ಲಿನ ಪ್ರತಿ ಎಕರೆ ಜಮೀನಿಗೆ ಖಾಸಗಿ ದರ ಸುಮಾರು ₹70 ಲಕ್ಷ ಇದೆ. ಆದರೆ, ಸರ್ಕಾರ ₹28 ಲಕ್ಷ ಕೊಟ್ಟು ಖರೀದಿಸಲು ಮುಂದಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಹೀಗಾಗಿ, ಖಾಸಗಿ ಬೆಲೆ ಕೊಟ್ಟು ಖರೀದಿಸುವಂತೆ ಸ್ಥಳೀಯ ಕೃಷಿಕರು ಕೋರಿದರು.

‘ಇದನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ‘ಸಮೀಕ್ಷೆಯಲ್ಲಿ 1,182 ಎಕರೆ ಅಂಜನಾದ್ರಿ ವ್ಯಾಪ್ತಿಗೆ ಬಂದಿದಿದೆ. ನೀಲನಕ್ಷೆಯ ಪ್ರಕಾರ 28 ಕಾಮಗಾರಿಗಳಿಗೆ ಕೇವಲ 60 ಎಕರೆ ಸಾಕಾಗಲಿದೆ’ ಎಂದರು.

ಸಾರ್ವಜನಿಕ ಶೌಚಾಲಯಕ್ಕೆ ತುಂಗಾಭದ್ರ ಜಲಾಶಯದ ಸಣ್ಣ ಕಾಲುವೆ ನೀರು ಅಪ್ಪಳಿಸುತ್ತದೆ. ತಡೆಗೊಡೆ ನಿರ್ಮಿಸುವಂತೆ ಸಚಿವರಿಗೆ ಮನವಿ ಮಾಡಿದ‌‌ರು. ತಾಂತ್ರಿಕ ತಜ್ಞರನ್ನು ಕರೆಯಿಸಿ, ಸಮೀಕ್ಷೆ ಮಾಡಿ ತಡೆಗೊಡೆ ನಿರ್ಮಿಸುವಂತೆ ಜಿಲ್ಲಾಧಿಕಾರಿ, ಆಯುಕ್ತರಿಗೆ ಅವರು ಸೂಚಿಸಿದರು.

ಸಿಇಒ ಫೌಜೀಯಾ ತರುನ್ನಮ್, ಎ.ಸಿ ಬಸವಣ್ಣೆಪ್ಪ ಕಲಶೆಟ್ಟಿ, ಹಂಪಿ ಪ್ರಾಧಿಕಾರದ ಆಯುಕ್ತ ಸಿದ್ಧರಾಮೇಶ್ವರ, ತಹಶೀಲ್ದಾರ್ ಯು.ನಾಗರಾಜ, ಅರಣ್ಯ ವಲಯ ಅಧಿಕಾರಿ ಶಿವರಾಜ ಮೇಟಿ, ದೇವಸ್ಥಾನದ ವ್ಯವಸ್ಥಾಪಕ ಮಡಿವಾಳ ವೆಂಕಟೇಶ ಇದ್ದರು.

ಮಾಲೀಕರು– ಸಚಿವರ ನಡುವೆ ವಾಗ್ವಾದ

ಹೋಟೆಲ್‌ ಆರಂಭದ ಪರವಾನಗಿ ಸಂಬಂಧ ಸಾಣಾಪುರ, ಹನುಮನಹಳ್ಳಿ, ಚಿಕ್ಕರಾಂಪುರ ಭಾಗದ ರೆಸಾರ್ಟ್ ಮಾಲೀಕರು ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಆನಂದ್ ಸಿಂಗ್ ನಡುವೆ ವಾಗ್ವಾದ ನಡೆಯಿತು.

‘ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ, ಹೋಟೆಲ್ ಪರವಾನಿಗೆ ಬಗ್ಗೆ ತೀರ್ಮಾನಿಸಲಾಗುವುದು. ಇದಕ್ಕ ಸ್ವಲ್ಪ ತಡವಾಗಬಹುದು’ ಎಂದರು.

ಆಗ ಕೆಲ ರೆಸಾರ್ಟ್ ಮಾಲೀಕರು ಹಂಪಿ, ಕಮಲಾಪುರ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಟೆಲ್ ಚಾಲ್ತಿಯಲ್ಲಿವೆ. ನಮ್ಮ ಭಾಗದಲ್ಲಿ ಏಕೆ ಮುಚ್ಚಿಸಲಾಗಿದೆ’ ಎಂದು ಪ್ರಶ್ನಿಸಿದರು.

‘ಚಾಲ್ತಿಯಲ್ಲಿ ಇರುವ ರೆಸಾರ್ಟ್ ತೋರಿಸಿ. ಕೂಡಲೇ ಮುಚ್ಚಿಸುತ್ತೇನೆ’ ಎಂದರು. ‘ಕಮಲಾಪುರ ಭಾಗಕ್ಕೆ ಬನ್ನಿ ತೋರಿಸುತ್ತೇವೆ’ ಎಂದು ಮಾಲೀಕರು ಆಹ್ವಾನಿಸಿದರು. ಆಗ ಸಚಿವರು ಕೋಪದಿಂದ, ‘ರೆಸಾರ್ಟ್ ಮಾಲೀಕರನ್ನು ಕರೆದುಕೊಂಡು ಹೋಗಿ ಹಂಪಿ, ಕಮಲಾಪುರ ವ್ಯಾಪ್ತಿಯ ರೆಸಾರ್ಟ್, ಹೊಟೇಲ್ ಮುಚ್ಚಿಸುವಂತೆ’ ಹಂಪಿ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.

*ಕಾಮಗಾರಿ ಕೈಗೊಳ್ಳಲು ಯಾವ ಜಾಗ ಸೂಕ್ತ ಎಂಬುದನ್ನು ತಿಳಿಯಲು ಮುಜಾರಾಯಿ ಇಲಾಖೆ ಆದೇಶದಂತೆ ಅಂಜನಾದ್ರಿ ಸುತ್ತ 500 ಮೀ. ಒಳಗಡೆ ಸಮೀಕ್ಷೆ ನಡೆಸಲಾಗಿದೆ
-ಸುರಳ್ಕರ್ ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ

*ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂಬುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಅನ್ಯ ರಾಜ್ಯದವರ ವಾದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿ ಕೆಲಸಗಳು ನಿಲಲ್ಲ
-ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.