ADVERTISEMENT

ಗಂಗಾವತಿ: ದೇವಿ ಆಭರಣ ಕಳ್ಳರ ಪತ್ತೆಹಚ್ಚಲು ಮನವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 7:28 IST
Last Updated 1 ಆಗಸ್ಟ್ 2025, 7:28 IST
ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು
ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು   

ಗಂಗಾವತಿ: ತಾಲ್ಲೂಕಿನ ಪಂಪಾಸರೋವರದ ಜಯಲಕ್ಷ್ಮಿ ದೇವಸ್ಥಾನದಲ್ಲಿ ಎರಡು ತಿಂಗಳ ಹಿಂದೆ ಕಳ್ಳತನವಾದ ದೇವಿ ಬೆಳ್ಳಿ ಪ್ರಭಾವಳಿ, ಪಾದುಕೆಗಳನ್ನು ಪತ್ತೆಹಚ್ಚಿ ದೇವಸ್ಥಾನಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ಗುರುವಾರ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಗ್ರೇಡ್-2 ತಹಶೀಲ್ದಾರ್‌ ಮಹಾಂತೇಶಗೌಡ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಗ್ರಾಮೀಣ ಠಾಣೆ ಪಿಐ ರಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

‘ರಾಮಾಯಣ ಕಾಲದ ಇತಿಹಾಸ ಹೊಂದಿದ ಪಂಪಾಸರೋವರದ ಜಯಲಕ್ಷ್ಮಿ ದೇವಸ್ಥಾನದಲ್ಲಿ ಮೆ.20ರಂದು  ಕಳ್ಳತನವಾಗಿದ್ದು, ಈವರೆಗೆ ಕಳ್ಳರನ್ನು ಪತ್ತೆ ಹಚ್ಚುವ ಕೆಲಸವಾಗಿಲ್ಲ. ಹಾಗೇ ಪಂಪಾಸರೋವರ ಮುಖ್ಯರಸ್ತೆ ತಿರುವಿನ ಕಟ್ಟೆ ಮೇಲಿದ್ದ ಆಂಜನೇಯನ ಕಲ್ಲಿಗ ಮೂರ್ತಿ, ಮುಖ್ಯರಸ್ತೆಯಿಂದ ಪಂಪಾಸರೋವರವರೆಗೆ ಅಳವಡಿಸಿದ ಸೋಲಾರ್ ಕಂಬಗಳೂ ಸಹ ಕಣ್ಮರೆಯಾಗಿವೆ. ಈ ಭಾಗದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವನ್ನೇ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

‘ಕೂಡಲೇ ಪೊಲೀಸರು, ಸಂಬಂಧಪಟ್ಟ ಅಧಿಕಾರಿಗಳು ಕಳ್ಳರನ್ನು ಪತ್ತೆಹಚ್ಚಿ, ವಸ್ತುಗಳನ್ನು ಮೂಲ ಸ್ಥಳಕ್ಕೆ ಒಪ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೇರಿ, ಜಿಲ್ಲಾ ಸಂಚಾಲಕ ವೀರೇಶ, ಜಿಲ್ಲಾ ಸಂಪರ್ಕ ಪ್ರಮುಖ್‌ ಎನ್. ಪದ್ಮನಾಭರಾಜು, ಜಿಲ್ಲಾ ಸಹ ಸಂಚಾಲಕ ಮಂಜುನಾಥ ಸಂಗಾಪುರ, ರುದ್ರೇಶ, ಹೂಗಾರ ಕುಮಾರ, ರಮೇಶ, ವೀರೇಶ ಹನುಮನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.