ADVERTISEMENT

ಕೊಪ್ಪಳ: ಜಿಲ್ಲೆಯ 13 ಕೇಂದ್ರಗಳಲ್ಲಿ ‘ಆಶಾಕಿರಣ’

ವಯೋವೃದ್ದರು, ವಿದ್ಯಾರ್ಥಿಗಳಲ್ಲಿ ಕಂಡು ಬರುವ ಕಣ್ಣಿನ ಸಮಸ್ಯೆಗಳಿಗೆ ಇದ್ದೂರಿನಲ್ಲಿಯೇ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:04 IST
Last Updated 13 ಜುಲೈ 2025, 3:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ವಯೋವೃದ್ಧರು ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಕಣ್ಣಿನ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಬೇಕಾದ ಸೂಕ್ತ ಚಿಕಿತ್ಸೆ ಹಾಗೂ ಕನ್ನಡಕವನ್ನು ಉಚಿತವಾಗಿ ನೀಡುವ ‘ಆಶಾಕಿರಣ’ ಯೋಜನೆ ಈ ಬಾರಿ ಜಿಲ್ಲೆಯಲ್ಲಿಯೂ ಆರಂಭವಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಅಡಿಯಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಆರಂಭವಾಗಿತ್ತು. ಹಂತ ಹಂತವಾಗಿ ಜಿಲ್ಲೆಗಳ ಸಂಖ್ಯೆ ಹೆಚ್ಚಿಸಲಾಯಿತು. ಇದೇ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ‘ಆಶಾಕಿರಣ’ ಆರಂಭವಾಗಿದ್ದು, ವೃದ್ಧರು ಮತ್ತು ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಇದು ಬೆಳಕು ಮೂಡಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕು ಆಸ್ಪತ್ರೆಗಳು, ಮುನಿರಾಬಾದ್‌, ಹಿರೇಸಿಂಧೋಗಿ, ಕುಕನೂರು, ಮಂಗಳೂರು, ಕಾರಟಗಿ, ತಾವರಗೇರಾ, ಕನಕಗಿರಿ, ಹಿರೇವಂಕಲಕುಂಟಾ ಹಾಗೂ ಶ್ರೀರಾಮನಗರ ಸಮುದಾಯದ ಆರೋಗ್ಯ ಕೇಂದ್ರಗಳಲ್ಲಿ ‘ಆಶಾಕಿರಣ’ ದೃಷ್ಟಿ ಕೇಂದ್ರಗಳನ್ನು ಈಗ ಆರಂಭಿಸಲಾಗಿದೆ.

ADVERTISEMENT

ಈ ಯೋಜನೆ ಮಂಜೂರಾದ ಮೊದಲು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯಿಂದ ಶಾಲೆಗಳು ಹಾಗೂ ಮನೆ ಮನೆಗಳಿಗೆ ಹೋಗಿ ಕಣ್ಣಿನ ತಪಾಸಣೆ ಮಾಡಲಾಗುತ್ತಿತ್ತು. ಸಮಸ್ಯೆ ಸಣ್ಣದಾಗಿದ್ದರೆ ಅಲ್ಲಿಯೇ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿ ಉಪಶಮನ ಕಾರ್ಯ ನಡೆಯುತ್ತಿತ್ತು. ಗಂಭೀರ ಸಮಸ್ಯೆಯಿದ್ದರೆ ಜಿಲ್ಲಾ ಆಸ್ಪತ್ರೆಗೆ ತೆರಳುವಂತೆ ಹೇಳುತ್ತಿದ್ದರು.

ಈಗ ಜಿಲ್ಲೆಯ ಪ್ರತಿ ತಾಲ್ಲೂಕು ವ್ಯಾಪ್ತಿಯಲ್ಲಿ ‘ಆಶಾಕಿರಣ’ ದೃಷ್ಟಿ ಕೇಂದ್ರ ಆರಂಭಿಸಿದ್ದು, ವೃದ್ಧರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗುತ್ತದೆ. ಪ್ರಸ್ತುತ ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಉಚಿತವಾಗಿ ಚಿಕಿತ್ಸೆ ಮತ್ತು ಕನ್ನಡಕ ಲಭಿಸುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಇದರ ಸೌಲಭ್ಯ ಲಭಿಸುತ್ತದೆ ಎಂದು ಅಂಧತ್ವ ನಿವಾರಣಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೋಗ್ಯ’ ಎನ್ನುವ ಘೋಷವಾಕ್ಯ ಹೊಂದಿರುವ ಆಶಾಕಿರಣ ಯೋಜನೆ 2022ರಲ್ಲಿ ಆರಂಭವಾಗಿತ್ತು. ಮೊದಲು ಹಾವೇರಿ, ಕಲಬುರಗಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಎರಡನೇ ಹಂತದಲ್ಲಿ ರಾಯಚೂರು, ಮಂಡ್ಯ, ಚಿತ್ರದುರ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರಂಭಿಸಲಾಗಿತ್ತು. ಈಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಿಸಲಾಗಿದೆ.

ಆಶಾಕಿರಣ ಯೋಜನೆಯಿಂದ ವಿದ್ಯಾರ್ಥಿಗಳು ಮತ್ತು ವಯೋವೃದ್ಧರಿಗೆ ಅನುಕೂಲವಾಗುತ್ತದೆ. ಈಗ ತಮ್ಮೂರಿನಲ್ಲಿ ಕಣ್ಣಿನ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶವಿದೆ.
– ಡಾ. ಪ್ರಕಾಶ ಎಚ್‌,  ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ

ಕನ್ನಡಕ ವಿತರಣೆ

ಅಗತ್ಯ ಇರುವವರನ್ನು ತಪಾಸಣೆಗೆ ಒಳಗಾದ ಬಳಿಕ ಅಂಧತ್ವ ನಿವಾರಣೆ ಇಲಾಖೆಯಿಂದಲೇ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಗುತ್ತಿದೆ. 2024ರ ಏಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ 5600 ವಿದ್ಯಾರ್ಥಿಗಳು ಮತ್ತು 4600 ವಯೋವೃದ್ಧರಿಗೆ ಕನ್ನಡಕ ನೀಡಲಾಗಿದೆ. ಇನ್ನು 500 ಕನ್ನಡಕ ವಿತರಣೆ ಬಾಕಿ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.