ಅಮಾನತು
ಕೊಪ್ಪಳ: ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ನೌಕರಿಗೆ ನೇಮಕವಾದ ಆರೋಪದ ಮೇಲೆ ಇಲಾಖೆಯ ವಿಚಾರಣೆ ಬಾಕಿ ಇರಿಸಿ ಗಂಗಾವತಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜ್ಞಾನೇಶ್ವರಿ ಜಿ.ಆರ್. ಅವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಈ ಹುದ್ದೆಗೆ ನೇಮಕವಾಗಲು ಅಭ್ಯರ್ಥಿ ತಮಗೆ ಸಂಬಂಧಿಸಿದ ವಿಷಯದಲ್ಲಿ ಪಿಎಚ್.ಡಿ. ಪದವಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರಬೇಕು, ಮೂರು ವರ್ಷಗಳ ಉಪನ್ಯಾಸಕರ ಸೇವಾ ಅನುಭವ ಹೊಂದಿದ್ದರೆ ಅವರು ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಲು ಅರ್ಹರಾಗಿರುತ್ತಾರೆ ಎನ್ನುವ ನಿಯಮವಿತ್ತು. ಒಂದು ವೇಳೆ ಪಿಎಚ್.ಡಿ ಪಡೆಯದವರು ಪದವಿ ಹಾಗೂ ಸ್ನಾತಕೋತ್ತರ ಪದವಿಯೊಂದಿಗೆ ಐದು ವರ್ಷಗಳ ಉಪನ್ಯಾಸಕರ ಸೇವಾ ಅನುಭವ ಹೊಂದಿದ್ದರೆ ಕರ್ತವ್ಯಕ್ಕೆ ಸೇರಿದ ಏಳು ವರ್ಷಗಳ ಒಳಗೆ ಕಡ್ಡಾಯವಾಗಿ ಪಿಎಚ್.ಡಿ. ಪದವಿ ಪಡೆಯಬೇಕು ಎನ್ನುವ ಷರತ್ತು ವಿಧಿಸಿಯೇ ನೌಕರಿಗೆ ನೇಮಕ ಮಾಡಿಕೊಳ್ಳಲಾಗಿತ್ತು.
ಏಳು ವರ್ಷಗಳ ಒಳಗೆ ಪಿಎಚ್.ಡಿ. ಪಡೆಯುವ ಷರತ್ತಿನೊಂದಿಗೆ ಜ್ಞಾನೇಶ್ವರಿ ಸಹಾಯಕ ಪ್ರಾಧ್ಯಾಪಕಿಯಾಗಿ ನೇರವಾಗಿ ನೇಮಕಾತಿ ಹೊಂದಿದ್ದರು. ಆದರೆ ಅವರು ಸಲ್ಲಿಸಿರುವ ಐದು ವರ್ಷಗಳ ಸೇವಾನುಭವ ಪ್ರಮಾಣಪತ್ರ ದೋಷಭರಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಳ್ಳು ಮಾಹಿತಿ ನೀಡಿ ಸರ್ಕಾರಕ್ಕೆ ವಂಚನೆ ಮಾಡಲಾಗಿದ್ದು ಎಂದು ಬಂದಿದ್ದ ದೂರನ್ನು ಇಲಾಖೆಯ ಮೇಲಧಿಕಾರಿಗಳು ತನಿಖೆ ಮಾಡಿದ್ದು ಉನ್ನತ ಶಿಕ್ಷಣ ಇಲಾಖೆಯ (ತಾಂತ್ರಿಕ ಶಿಕ್ಷಣ) ಸರ್ಕಾರದ ಅಧೀನ ಕಾರ್ಯದರ್ಶಿ ರೂಪ ಪಿ. ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.