ADVERTISEMENT

ಅತ್ಯಾಚಾರ ಪ್ರಕರಣ: ಗಂಗಾವತಿ ರೆಸಾರ್ಟ್‌ಗಳ ಮಾಲೀಕರಿಗೆ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 15:45 IST
Last Updated 9 ಮಾರ್ಚ್ 2025, 15:45 IST
ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆ ಬಳಿ ಭಾನುವಾರ ಪೊಲೀಸರು ಪರಿಶೀಲನೆ ನಡೆಸಿದರು
ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆ ಬಳಿ ಭಾನುವಾರ ಪೊಲೀಸರು ಪರಿಶೀಲನೆ ನಡೆಸಿದರು   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಸಾಣಾಪುರ ಕೆರೆ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕ ಇಬ್ಬರು ಮಹಿಳೆಯರ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಹೋಂ ಸ್ಟೇ ಮಾಲೀಕರ ಜೊತೆ ಸಭೆ ನಡೆಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಶನಿವಾರವೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಯನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಮೂರು ದಿನಗಳ ಹಿಂದೆ ನಡೆದ ಘಟನೆಯಲ್ಲಿ ಇಸ್ರೇಲ್‌ನ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೇ ಒಡತಿಯೊಬ್ಬರ ಮೇಲೆ ಅತ್ಯಾಚಾರ ನಡೆದಿತ್ತು. ಒಡಿಶಾದ ಯುವಕನನ್ನು ಹೊಡೆದು ಕಾಲುವೆಯಲ್ಲಿ ನೂಕಿದ್ದರಿಂದ ಅವರು ಮೃತಪಟ್ಟಿದ್ದಾರೆ.

ADVERTISEMENT

‘ಮೂರನೇ ಆರೋಪಿಯನ್ನ ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ‘ಸಾಣಾಪುರ ಘಟನೆಯ ಮೂರೂ ಜನ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.  

ಸ್ಥಳ ಮಹಜರು: ಘಟನಾ ಸ್ಥಳಕ್ಕೆ ಭಾನುವಾರ  ಇಬ್ಬರು ಆರೋಪಿಗಳನ್ನು ಕರೆ ತಂದ ಪೊಲೀಸರು ಮಹಜರು ಮಾಡಿದರು. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಸೋಮಶೇಖರ ಜುಟ್ಟಲ್ ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಗಳನ್ನು ಕರೆ ತರಲಾಯಿತು.

ಹೆಚ್ಚಿದ ಗಸ್ತು: ಘಟನೆ ಬಳಿಕ ಸಾಣಾಪುರ ಹಾಗೂ ಸುತ್ತಲಿನ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಕಾರಣ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಡಿಎಆರ್‌ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಸ್ಥಳದತ್ತ ಮತ್ತು ಇತರೆ ಪ್ರವಾಸಿ ತಾಣಗಳತ್ತ ಜನ ತೆರಳದಂತೆ ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.