
ಕೊಪ್ಪಳ: ರಾಜ್ಯದ ನಾಲ್ಕು ಜಿಲ್ಲೆಗಳ ಜನರಿಗೆ ಕೃಷಿ ಚಟುವಟಿಕೆ ಮತ್ತು ಕುಡಿಯಲು ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ನೀರು ಹಂಚಿಕೆ ಮಾಡಲು ಶುಕ್ರವಾರ ನೀರಾವರಿ ಸಲಹಾ ಸಮಿತಿ ಸಭೆ ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದು, ರೈತರ ಚಿತ್ತ ಆ ಸಭೆಯತ್ತ ಹರಿದಿದೆ.
ಈ ಸಲ ಮುಂಗಾರು ಪೂರ್ವದಲ್ಲಿಯೇ ದಕ್ಷಿಣದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಅವಧಿಗಿಂತಲೂ ಮೊದಲೇ ನೀರು ಜಲಾಶಯಕ್ಕೆ ಬಂದಿದೆ. ಈ ನೀರಿನಲ್ಲಿ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಪಾಲುದಾರರಾಗಿವೆ. ರಾಜ್ಯದಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಜನರಿಗೆ ಜಲಾಶಯದ ನೀರು ಆಸರೆಯಾಗಿದೆ. ಪಾಲುದಾರ ರಾಜ್ಯಗಳ ನಿಗದಿತ ನೀರು ಉಳಿಸಿದ ಬಳಿಕ ಉಳಿಯುವ ನೀರಿನಲ್ಲಿ ಜಲಾಶಯದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಖಾರಿಫ್ ಬೆಳೆಗಳಿಗೆ ನೀರು ಹರಿಸಬೇಕಾಗಿದೆ.
ಜಲಾಶಯದ ಗರಿಷ್ಠ ಮಟ್ಟ 1633 ಅಡಿಗಳಷ್ಟು ಇದ್ದು, ಗುರುವಾರ (ಜೂ. 25) ಬೆಳಿಗ್ಗೆ ಅಂತ್ಯಕ್ಕೆ 1616.85 ಅಡಿ ನೀರು ಸಂಗ್ರಹವಾಗಿತ್ತು. ಒಟ್ಟು ಸಂಗ್ರಹಣಾ ಸಾಮರ್ಥ್ಯ 105.788 ಟಿಎಂಸಿ ಅಡಿಯಿದ್ದು, ಪ್ರಸ್ತುತ 52.939 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ದಿನಗಳಿಂದ ಒಳಹರಿವು ಕೂಡ ಉತ್ತಮವಾಗಿದೆ. ಒಂದೇ ದಿನ 38,080 ಕ್ಯೂಸೆಕ್ಸ್‌ನಷ್ಟು ಒಳಹರಿವು ನೀರು ಬಂದಿದೆ.
ಈ ಜಲಾಶಯದ ನೀರು ಬಳಸಿಕೊಂಡು ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ಹಾಗೂ ಕೊಪ್ಪಳ ತಾಲ್ಲೂಕಿನ ಕೆಲವು ಭಾಗದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಈ ಮೂರು ತಾಲ್ಲೂಕುಗಳನ್ನು ಒಳಗೊಂಡೇ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ನಷ್ಟು ಭತ್ತ ಬಿತ್ತನೆ ಪ್ರದೇಶವಿದೆ. ಇದಲ್ಲದೆ ರಾಯಚೂರು, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಗೂ ನೀರು ಹರಿಸಬೇಕಿದೆ.
ಕಳೆದ ವರ್ಷ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದು ಹೋಗಿದ್ದರಿಂದ ತಾತ್ಕಾಲಿಕವಾಗಿ ಗೇಟ್ ಅಳವಡಿಕೆ ಮಾಡಲಾಗಿದೆ. ಏಳು ದಶಕಗಳಷ್ಟು ಹಳೆಯದಾದ ಆಣೆಕಟ್ಟಿನ ಎಲ್ಲ ಗೇಟ್‌ಗಳನ್ನು ಬದಲಿಸಬೇಕು ಎಂದು ಜಲಾಶಯಗಳ ಸುರಕ್ಷತಾ ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. ಆದ್ದರಿಂದ 105.788 ಟಿಎಂಸಿ ಅಡಿ ಸಾಮರ್ಥ್ಯದ ತುಂಗಭದ್ರಾದಲ್ಲಿ ಗರಿಷ್ಠ 80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹ ಮಾಡಲು ಟಿ.ಬಿ. ಬೋರ್ಡ್ ಅಧಿಕಾರಿಗಳು ಸೂಚಿಸಿದ್ದಾರೆ.
ಒಂದೆಡೆ ನೀರು ಸಂಗ್ರಹ ಪ್ರಮಾಣ ಮೊದಲಿಗಿಂತ ಕಡಿಮೆಯಾಗಲಿದ್ದು, ವರ್ಷದಲ್ಲಿ ಎರಡು ಬಾರಿ ಬೆಳೆಯುವ ಭತ್ತಕ್ಕೆ ಜಲಾಶಯದಿಂದಲೇ ನೀರು ಒದಗಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ. ವರ್ಷದ ಮೊದಲ ಸಲಹಾ ಸಮಿತಿ ಸಭೆಯಲ್ಲಿ ಮೊದಲ ಬೆಳೆಗೆ ಮಾತ್ರ ನೀರು ಹರಿಸುವ ಬಗ್ಗೆ ಚರ್ಚೆ ನಡೆಯಲಿದ್ದು, ಬಳಿಕವೂ ಉತ್ತಮ ಮಳೆಯಾಗಿ ಒಳಹರಿವು ಬಂದರೆ ಮಾತ್ರ ಎರಡನೇ ಬೆಳೆಗೆ ನೀರು ಹರಿಸುವ ಬಗ್ಗೆ ಚಿಂತನೆ ನಡೆಯಲಿದೆ. ಮೊದಲ ಬೆಳೆಗಾದರೂ ಎಷ್ಟು ನೀರು ಸಿಗುತ್ತದೆ ಎನ್ನುವುದು ರೈತರಲ್ಲಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಸಭೆ ಆಯೋಜನೆಗೆ ಆಕ್ಷೇಪ
ಕೊಪ್ಪಳ: ‘ರೈತರ ಬೇಕು ಬೇಡಗಳನ್ನು ಕೇಳಲು ಪ್ರತಿವರ್ಷದಂತೆ ಈ ಬಾರಿಯೂ ಮುನಿರಾಬಾದ್‌ನಲ್ಲಿಯೇ ಐಸಿಸಿ ಸಲಹಾ ಸಮಿತಿ ಸಭೆ ನಡೆಸಬೇಕಿತ್ತು. ಯಾರ ಸಲುವಾಗಿ ಬೆಂಗಳೂರಿನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಪ್ರಶ್ನಿಸಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರೈತರಿಗೆ ಎರಡು ಬೆಳೆಗೆ ನೀರು ಬೇಕು. ಮುರಿದು ಹೋದ ಕ್ರಸ್ಟ್‌ಗೇಟ್‌ಗೆ ಕಾಯಂ ಗೇಟ್ ಕಲ್ಪಿಸಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಮಳೆಗಾಲದ ವೇಳೆಗೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ’ ಎಂದು ಆರೋಪಿಸಿದರು. ‘ರಾಜ್ಯ ಸರ್ಕಾರದ ಬಳಿಯಂತೂ ಹಣವಿಲ್ಲ; ಕನಿಷ್ಠ ಇರುವ ನೀರನ್ನಾದರೂ ರೈತರಿಗೆ ಕೊಡಲಿ. ಈಗಿನ ಸರ್ಕಾರಕ್ಕೆ ಕಾಳಜಿ ಇಲ್ಲ. ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಶಿವರಾಜ ತಂಗಡಗಿ ಮುಖ್ಯಮಂತ್ರಿ ಬಳಿಕ ನಾನೇ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ರೈತರ ಆಶಯಕ್ಕೆ ತಕ್ಕಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ ಗುಡದಳ್ಳಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪುಟ್ಟರಾಜ ಚಕ್ಕಿ ಮುಖಂಡರಾದ ಗಣೇಶ ಹೊರತಟ್ನಾಳ ಹಾಗೂ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.