ADVERTISEMENT

ಬಾಲಕಿಗೆ ಇಲ್ಲವಾಯಿತೆ ಅಯ್ಯಪ್ಪನ ಶ್ರೀರಕ್ಷೆ?

ಬಾಲಕಿ ಸೇರಿ ನಾಲ್ಕರ ದುರ್ಮರಣ: ಕುಟುಂಬದವರಲ್ಲಿ ಮುಗಿಲುಮುಟ್ಟಿದ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 5:00 IST
Last Updated 10 ಜನವರಿ 2026, 5:00 IST
ಸಾಕ್ಷಿ
ಸಾಕ್ಷಿ   

ಕುಕನೂರು: ‘ಯಪ್ಪಾ ಆ ದೇವರಿಗೆ ನಾವೇನು ಅನ್ಯಾಯ ಮಾಡಿವ್ರಿ, ನಮ್ಮ ಮಗಳನ್ನು ಎಲ್ಲಿ ಹುಡ್ಕೋಣ?, ನಮ್ಮ ಮನಿ ಮುಳಗಿತಲ್ಲೋ ಅವಳನ್ನ ಕಳ್ಕೊಂಡ್ ನಾವು ಹೆಂಗ್ ಬಾಳುವೆ ಮಾಡೋಣ’ ಎಂದು ಸಾಕ್ಷಿಯ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು.

ಆ ಅಯ್ಯಪ್ಪ ನಮ್ ಮ್ಯಾಲೆ ಯಾಕೆ ಸಿಟ್ಟಾದನೋ, ನಾವೇನು ಅನ್ಯಾಯ ಮಾಡಿವಿ. ಈಗ ನಮ್ಗ್ ಯಾರು ಇಲ್ದಂಗ್ ಆಯಿತಲ್ಲೋ ಅಯ್ಯಪ್ಪ.... ಇದು ತುಮಕೂರು ಬಳಿ ನಡೆದ ಅಪಘಾತದಲ್ಲಿ ನಾಲ್ಕು ಜನರರನ್ನು ಕಳೆದುಕೊಂಡ ಪರಿವಾರದವರ ರೋಧನದ ಪರಿ.

ಜಗತ್ತನ್ನೇ ಕಾಪಾಡುವ ತಂದೆ ಅಯ್ಯಪ್ಪ ಸ್ವಾಮಿ ಎಂದು ಮಡಿಯಿಂದ ಭಕ್ತಿಯಿಂದ ಪೂಜೆ ಮಾಡಿ ಶಬರಿಗಿರಿ ಕಂಡು ಅಯ್ಯಪ್ಪನ ದರ್ಶನ ಭಾಗ್ಯ ದೊರೆತರು ಪುಟ್ಟ ಕಂದ ಸಾಕ್ಷಿಯ ಮೇಲೆ ಆ ಮಣಿಕಂಠನ ಶ್ರೀರಕ್ಷೇ ಇಲ್ಲಾವಾಯಿತೇ. ಶಬರಿ ಮಲೈ ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ಮರಳುವಾಗ ಕ್ರಶರ್ ಲಾರಿಗೆ ಡಿಕ್ಕಿಯಾದ ಪರಿಣಾಮ ಬಾಲಕಿ ಸೇರಿ ನಾಲ್ಕು ಜನರ ದುರಂತ ಸಾವು ಕಂಡಿದೆ.

ADVERTISEMENT

ಜೀವನದಲ್ಲಿ ಆಡಿ ಬಾಳಬೇಕಾದ ಏನೂ ಅರಿಯದ ಪುಟ್ಟ ಕಂದಮ್ಮ ನನ್ನು ನೆನೆದು ಹಿರಿಯ ಜೀವಗಳು ಕಣ್ಣೀರಿಟ್ಟು ಈ ಇಳಿ ವಯಸ್ಸಿನಲ್ಲಿ ನಾವು ಇದ್ದು ಏನು ಮಾಡಬೇಕಾಗಿದೆ. ಆ ಅಯ್ಯಪ್ಪ ನಮ್ಮನಾದ್ರು ಕರೆದುಕೊಳ್ಳಬಾರದೇ ಎಂದು ಮರುಕು ಪಡುತ್ತಿರುವುದು ಎಂತವರ ಕಣ್ಣಿನ್ನಲ್ಲೂ ನೀರು ತರದೆ ಇರದು.

ದುರಂತದ ಸುದ್ದಿ ತಿಳಿಯುತ್ತಲೇ ಗಾಂಧಿನಗರದಲ್ಲಿ ದುಃಖ ತುಂಬಿಕೊಂಡಿತು. ಸಂಬಂಧಿಕರ ರೋಧನ ಮುಗಿಲು ಮುಟ್ಟಿತು. ಎಲ್ಲೆಡೆ ನೀರವ ಮೌನ ಆವರಿಸಿಕೊಂಡು ಸ್ಮಶಾನ ಸೂತಕವಾಗಿ ಕಂಡು ಬಂದಿತು. ಬಾಲಕಿ ಸಾಕ್ಷಿ ಡಂಬರ್ ಅವರ ತಂದೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಪಟ್ಟಣದ ನಿವಾಸಿಗಳಾದ ಬಾಲಕಿ ಸಾಕ್ಷಿ ಹುಲಗಪ್ಪ ಡಂಬರ್ (7), ಕಟ್ಟಡ ಕಾರ್ಮಿಕರಾದ ವೆಂಕಟೇಶ್ ಸಿದ್ದಪ್ಪ ಗಾಟಿ (34), ಮಾರುತಿ ತೊಂಡಿಹಾಳ (45) ಹಾಗೂ ತಾಲ್ಲೂಕಿನ ನಿಟ್ಟಾಲಿ ಗ್ರಾಮದ ಗವಿಸಿದ್ದಪ್ಪ ರೆಡ್ಡೇರ್ (28) ಅಪಘಾತದಲ್ಲಿ ಮೃತಪಟ್ಟವರು. ಗ್ರಾಮದಿಂದ ಸುಮಾರು 10 ಜನ ಸೇರಿ ಅಯ್ಯಪ್ಪ ಸ್ವಾಮೀಜಿ ದೇವಸ್ಥಾನಕ್ಕೆ ತೆರಳಿದ್ದರು. ಗಾಯಗೊಂಡ ಆರು ಜನ ತುಮಕೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವಿನ ಸುದ್ದಿ ಕೇಳಿ ಬಡಾವಣೆ ನಿವಾಸಿಗಳು ಮೃತರ ಮನೆ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಇದಲ್ಲದೇ ಮೃತರ ಕುಟುಂಬದ ಸದಸ್ಯರು ರೋಧಿಸುತ್ತಿರುವ ವೇಳೆ ಅವರಿಗೆ ಸಾಂತ್ವನ ಹೇಳುತ್ತಿದ್ದರು. ಆದರೆ ಕೇಳುವ ಸ್ಥಿತಿಯಲ್ಲಿ ಸಹ ಅವರು ಇರಲಿಲ್ಲ. ಅವರ ಆಕ್ರಂದನ ಕೇಳಿ ಸಾಂತ್ವನ ಹೇಳುವವರ ಕರಳು ಚುರ್ ಎನಿಸುವಂತಿತ್ತು.

ವೆಂಕಟೇಶ್ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಮನೆಯ ಜವಾಬ್ದಾರಿ ಹೊತ್ತು ಸಾಗಿಸುತ್ತಿದ್ದ ವೆಂಕಟೇಶ್ ಅವರ ಸಾವಿನಿಂದ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ. ಮಾರುತಿ ತೊಂಡಿಹಾಳ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ತಾಲ್ಲೂಕಿನ ನಿಟ್ಟಾಲಿ ಗ್ರಾಮದ ಗವಿಸಿದ್ದಪ್ಪ ಮೂಲತಃ ಪಟ್ಟಣದ ವಿದ್ಯಾಶ್ರೀ ಶಾಲೆಯ ಬಸ್ ಚಾಲಕನಾಗಿದ್ದು, ಸುಮಾರು ವರ್ಷಗಳಿಂದ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸುತ್ತಿದ್ದರು. ಇಬ್ಬರು ಮಕ್ಕಳಿದ್ದು, ಅವರು ಅಳುವುದನ್ನು ಕಂಡು ಇಡೀ ಗ್ರಾಮದ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.