ADVERTISEMENT

ಕೊಪ್ಪಳ | ಉತ್ಸವಕ್ಕೆ ಸಜ್ಜಾದ ಬಹದ್ದೂರ ಬಂಡಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 5:35 IST
Last Updated 14 ಅಕ್ಟೋಬರ್ 2023, 5:35 IST
ಕೊಪ್ಪಳ ಸಮೀಪದ ಬಹದ್ದೂರ ಬಂಡಿಯಲ್ಲಿ ನಡೆಯಲಿರುವ ಉತ್ಸವಕ್ಕೆ ತಯಾರಿಯಾಗಿರುವುದು
ಕೊಪ್ಪಳ ಸಮೀಪದ ಬಹದ್ದೂರ ಬಂಡಿಯಲ್ಲಿ ನಡೆಯಲಿರುವ ಉತ್ಸವಕ್ಕೆ ತಯಾರಿಯಾಗಿರುವುದು   

ಕೊಪ್ಪಳ: ಇಲ್ಲಿಗೆ ಸಮೀಪದ ಬಹದ್ದೂರ ಬಂಡಿ ಗ್ರಾಮದ ಸೇವಾಲಾಲ್‌ ಭವನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ಮೊದಲ ಬಹದ್ದೂರ ಬಂಡಿ ಉತ್ಸವಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಗ್ರಾಮದ ಐತಿಹಾಸಿಕ ಕೋಟೆಯನ್ನು ಅಲಂಕರಿಸಲಾಗಿದೆ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಉತ್ಸವದ ಅಧ್ಯಕ್ಷರಾಗಿದ್ದು ಶನಿವಾರ ಬೆಳಿಗ್ಗೆ 11 ಗಂಟೆಗ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಯಮದ ಚೈತನ್ಯಾನಂದ ಸ್ವಾಮೀಜಿ, ಯುಸೂಫಿಯಾ ಮಸೂದಿಯ ಮುಫ್ತಿ ನಜೀರ್‌ ಅಹ್ಮದ್‌ ತಸ್ಕೀನ್‌ ಖಾದ್ರಿ ಸೇರಿದಂತೆ ಅನೇಕರು ಪಾಲ್ಗೊಳ್ಳುವರು.

ಮೊದಲ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ರಂಗೋಲಿಯನ್ನು ಹಾಕಲಾಗಿದೆ. ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಜೇನುಗೂಡು ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕವಿ ಗವಿಸಿದ್ದ ಎನ್‌. ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ.

ADVERTISEMENT

ಬಹದ್ದೂರ್‌ ಬಂಡಿ ಕೋಟೆ; ಚಾರಿತ್ರಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ, ಬಂಜಾರ ಸಮುದಾಯ ಮತ್ತು ಬಹದ್ದೂರ ಬಂಡಿ, ಅಭಿವೃದ್ಧಿ ಚಿಂತನೆ ಕುರಿತು ಗೋಷ್ಠಿಗಳು, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

’ಬಹದ್ದೂರ ಬಂಡಿ ಗ್ರಾಮ ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅದರ ಚರಿತ್ರೆ ಪ್ರತಿಯೊಬ್ಬರಿಗೂ ತಿಳಿಯುವಂತಾಗಲು ಈಗಿನ ಉತ್ಸವ ವೇದಿಕೆಯಾಗಬೇಕು ಎನ್ನುವ ಆಶಯ ನಮ್ಮದು. ಉತ್ಸವದಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು’ ಎಂದು ಉತ್ಸವದ ಅಧ್ಯಕ್ಷ ಎ.ವಿ. ಕಣವಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ ತಳವಾರ, ಸದಸ್ಯ ದಾದಾಪೀರ್‌ ಮಂಡಲಗೇರಿ, ಉತ್ಸವದ ಸಂಘಟಕ ಮೆಹಬೂಬ್‌ ಕಿಲ್ಲೇದಾರ್‌, ಸೈಯದ್‌ ಕಿಲ್ಲೇದಾರ್‌, ಮೆಹಬೂಬ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.