ಕೊಪ್ಪಳ: ಇಲ್ಲಿಗೆ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಲು ನಿರ್ಮಿಸಿರುವ ಕಾಂಪೌಂಡ್‌ನಲ್ಲಿರುವ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಯಾರಿಗೆ ಏನು ಹೇಳಿದೆ ಎನ್ನುವುದನ್ನು ನಿಖರವಾಗಿ ತಿಳಿದುಕೊಂಡೇ ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ನಗರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬಲ್ಡೋಟಾ ಕಂಪನಿ ವಿಸ್ತರಣೆ ಕೈ ಬಿಡಬೇಕು, ಕೆರೆಯನ್ನು ಜಾನುವಾರುಗಳಿಗೆ ಮುಕ್ತವಾಗಿಡಬೇಕು ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಹೋರಾಟ ಮಾಡುತ್ತಿದ್ದು, ಈ ಕುರಿತು ಹಿಂದಿನ ಮೂರ್ನಾಲ್ಕು ದಿನಗಳಲ್ಲಿ ನಡೆದ ಹೋರಾಟಗಳು ಸಂಘರ್ಷಕ್ಕೆ ತಿರುಗಿ ಹೋರಾಟಗಾರರು ಹಾಗೂ ಕಂಪನಿಯ ಭದ್ರತಾ ಸಿಬ್ಬಂದಿ ಮೇಲೆ ದೂರು, ಪ್ರತಿದೂರು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಪ್ರವಾಸಿ ಮಂದಿರದಲ್ಲಿ ಹೋರಾಟಗಾರರು ಹಾಗೂ ರೈತರ ಜೊತೆ ಸಭೆ ನಡೆಸಿದರು.
ಶಾಸಕ ಹಿಟ್ನಾಳ ಮಾತನಾಡಿ ‘ಸರ್ವಪಕ್ಷಗಳು, ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಕಾರ್ಖಾನೆ ತನ್ನ ವಿಸ್ತರಣೆ ಕೆಲಸವನ್ನು ಕೈಬಿಟ್ಟಿದೆ. ನಗರದಲ್ಲಿ ಶುದ್ಧ ಗಾಳಿ ಹಾಗೂ ನೀರು ಉಳಿಯಲು ಕಾರ್ಖಾನೆ ವಿಸ್ತರಣೆಯಾಗಲು ನೀವೆಲ್ಲರೂ ವ್ಯಕ್ತಪಡಿಸುತ್ತಿರುವ ವಿರೋಧಕ್ಕೆ ನಮ್ಮ ಬೆಂಬಲವೂ ಇದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ಮಾತನಾಡಿದ್ದೇನೆ. ನ್ಯಾಯಾಲಯಗಳ ಆದೇಶಗಳ ಬಗ್ಗೆ ವಕೀಲರಿಂದ ಲಿಖಿತ ರೂಪದಲ್ಲಿ ವರದಿ ಪಡೆದು ಮುಂದಿನ ನಡೆ ಬಗ್ಗೆ ಚರ್ಚಿಸೋಣ’ ಎಂದರು.
ಆಗ ಹೋರಾಟಗಾರರು ಜಿಲ್ಲಾಧಿಕಾರಿ ಹಾಗೂ ಎಸ್.ಪಿ. ಜೊತೆಗೆ ನಮ್ಮ ಸಮ್ಮುಖದಲ್ಲಿಯೇ ಮಾತನಾಡಿ ಎಂದು ಪಟ್ಟು ಹಿಡಿದಿದ್ದರಿಂದ ಹಿಟ್ನಾಳ ಸಹೋದರರು ಅಧಿಕಾರಿಗಳ ಜೊತೆ ಮಾತನಾಡಿದರು. ಇಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು ಎಂದು ಶಾಸಕ ಹಿಟ್ನಾಳ ತಿಳಿಸಿದರು.
‘ನ್ಯಾಯಾಲಯಗಳ ಆದೇಶದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲು ಜಿಲ್ಲಾಧಿಕಾರಿಗೆ ಒಂದು ವಾರ ಸಮಯ ಕೊಟ್ಟು ಬಳಿಕ ಲಿಖಿತ ರೂಪದಲ್ಲಿ ವಕೀಲರು ನೀಡುವ ಮಾಹಿತಿ ಪಡೆದುಕೊಳ್ಳೋಣ. ಬಳಿಕ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.
* ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದಂತೆ ಆಡಳಿತ ಪಕ್ಷದ ಶಾಸಕರು ಸಚಿವರು ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಆದೇಶ ವಾಪಸ್ ತರಬೇಕು.
* ವಿಸ್ತರಣೆ ಕಾಮಗಾರಿ ನಡೆಸದಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರೂ ಕೆಲಸ ನಡೆಯುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು.
* ರೈತರು ಹಾಗೂ ಹೋರಾಟಗಾರರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಿಸಬೇಕು.
* ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಸಂಪೂರ್ಣವಾಗಿ ವಾಪಸ್ ಪಡೆಯುಬೇಕು ತುರ್ತಾಗಿ ಬಸಾಪುರ ಕೆರೆಯನ್ನು ಜಾನುವಾರುಗಳಿಗೆ ಮುಕ್ತಗೊಳಿಸಬೇಕು.
* ಕಂಪನಿಯ ಭದ್ರತಾ ಸಿಬ್ಬಂದಿಯಿಂದ ಹಲ್ಲೆಗೆ ಒಳಗಾದ ದೇವಪ್ಪ ಹಾಲಳ್ಳಿ ಅವರಿಗೆ ನೆರವು ನೀಡಬೇಕು. * ಕಾರ್ಖಾನೆಗಳಿಂದ ಬಾಧಿತಗೊಂಡ ಗ್ರಾಮಗಳ ಜನರ ಆರೋಗ್ಯ ಸರ್ವೆ ಆಗಬೇಕು. ಅನಾರೋಗ್ಯ ಪೀಡಿತರಿಗೆ ಸರ್ಕಾರವೇ ಉಚಿತವಾಗಿ ಚಿಕಿತ್ಸೆ ಕೊಡಿಸಬೇಕು.
* ಬಲ್ಡೋಟಾ ಅಥವಾ ಕೊಪ್ಪಳ ಎರಡರಲ್ಲಿ ಒಂದು ಇರಬೇಕು. ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ.
* ಜಿಲ್ಲಾಕೇಂದ್ರದ ಸಮೀಪದಲ್ಲಿಯೇ ಕೈಗಾರಿಕೆಗಳು ಕೇಂದ್ರೀಕೃತ ಆಗುವುದನ್ನು ತಡೆಯಬೇಕು.
* ಉಸ್ತುವಾರಿ ಸಚಿವರು ಕೈಗಾರಿಕಾ ಸಚಿವರು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿತುಕೊಳ್ಳಬೇಕು.
ಶಾಸಕರ ಜೊತೆ ಸಂವಾದ ನಡೆಸಲು ಹಿಂದೆ ದಿನಾಂಕ ನಿಗದಿ ಮಾಡಿದ್ದಾಗ ಅವರು ಬಂದಿರಲಿಲ್ಲ. ಈಗ ಅವರೇ ಸಭೆ ನಡೆಸಿದ್ದಾರೆ. ಈ ಸಭೆ ತೃಪ್ತಿ ತಂದಿಲ್ಲ. ಹೋರಾಟ ಮುಂದುವರಿಸುತ್ತೇವೆ.-ಅಲ್ಲಮಪ್ರಭು ಬೆಟ್ಟದೂರು, ಬಚಾವೊ ಸಂಘಟನೆಯ ಸಂಚಾಲಕ
ಯಾವ ನ್ಯಾಯಾಲಯದ ವರದಿ ಏನು ಹೇಳಿದೆ ಎನ್ನುವುದು ನಮಗೆ ಹೋರಾಟಗಾರರಿಗೆ ಸ್ಪಷ್ಟವಾಗಿ ಗೊತ್ತಿಲ್ಲ. ಇದನ್ನು ನಿಖರವಾಗಿ ತಿಳಿದುಕೊಂಡು ಮುಂದಿನ ನಡೆ ತೀರ್ಮಾನಿಸಲಾಗುವುದು.-ರಾಘವೇಂದ್ರ ಹಿಟ್ನಾಳ, ಶಾಸಕ
ರೈತರು ಹೋರಾಟಗಾರರು ಯಾರ ಮೇಲಾದರೂ ಕಂಪನಿ ಸಿಬ್ಬಂದಿ ದೌರ್ಜನ್ಯ ಮಾಡಿದರೆ ಪ್ರಕರಣ ದಾಖಲಿಸುವಂತೆ ಎಸ್.ಪಿಗೆ. ಸೂಚಿಸಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ.-ರಾಜಶೇಖರ ಹಿಟ್ನಾಳ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.