ADVERTISEMENT

ಬಲ್ಡೋಟಾ ಕಾರ್ಖಾನೆ ವಿಸ್ತರಣೆಗೆ ವಿರೋಧ: ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:13 IST
Last Updated 7 ಅಕ್ಟೋಬರ್ 2025, 5:13 IST
ಕೊಪ್ಪಳದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು
ಕೊಪ್ಪಳದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು   

ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆಗೆ ಮುಂದಾಗಿದ್ದು ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಸಮಿತಿ ಪ್ರಮುಖರು ಸೋಮವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಬಸಾಪುರ ಎಂಎಸ್‌ಪಿಎಲ್‌ ಏರ್‌ ಸ್ಟ್ರಿಪ್ಟ್ ಹೊರಭಾಗದಲ್ಲಿ ಮನವಿ ಸಲ್ಲಿಸಿ  ‘ಕಾರ್ಖಾನೆಯ ದೂಳುಬಾಧಿತ 20 ಹಳ್ಳಿಗಳಿಗೆ ಮುಖ್ಯಮಂತ್ರಿ ಖುದ್ದಾಗಿ ಭೇಟಿ ಕೊಡಬೇಕು. ಈಗಿರುವ ಬಲ್ಡೋಟ ಘಟಕದಿಂದ ನಗರದ ಶೇ. 40ರಷ್ಟು ಭಾಗ ಪರಿಸರ ಹಾನಿಯಾಗಿದ್ದು ಜನರ ಆರೋಗ್ಯದ ಹಿತದೃಷ್ಟಿಯಿಂದ ಆ ಘಟಕ ಬಂದ್ ಮಾಡಬೇಕು, ಬಸಾಪುರದ 44.35 ಎಕರೆ ಕೆರೆಯನ್ನು ಸಾರ್ವಜನಿಕರು ಬಳಸಲು ಮುಕ್ತವಾಗಿಡಬೇಕು’ ಎಂದು ಮನವಿ ಮಾಡಿದರು. 

ಆಗ ಮುಖ್ಯಮಂತ್ರಿ ನಾನು ಇಲ್ಲಿ ಚುನಾವಣೆಗೆ ನಿಂತಿದ್ದೇನೆ, ನನಗೆ ಎಲ್ಲಾ ಗೊತ್ತಿದೆ ಎಂದಾಗ ಶಾಸಕ ರಾಘವೇಂದ್ರ ಹಿಟ್ನಾಳ ಮಧ್ಯಪ್ರವೇಶಿಸ ಗಡಿಬಿಡಿ ಮಾಡಿದರು ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ADVERTISEMENT

ಇದಕ್ಕೂ ಮೊದಲು ಅಶೋಕ ವೃತ್ತದಲ್ಲಿ ವೇದಿಕೆಯ ಬ್ಯಾನರ್ ಹಿಡಿದು ಬಲ್ಡೋಟಾ ತೊಲಗಲಿ, ಕೊಪ್ಪಳ ಉಳಿಯಲಿ, ಮುಖ್ಯಮಂತ್ರಿ ಬಾಧಿತ ಹಳ್ಳಿಗಳಿಗೆ ಭೇಟಿ ನೀಡಬೇಕೆಂದು ಪ್ರತಿಭಟನೆಗೆ ಮುಂದಾಗಿದ್ದರು. 

ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಕೆ.ಬಿ.ಗೋನಾಳ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಕರೀಮ್ ಪಾಷಾ ಗಚ್ಚಿನಮನಿ, ಬಸವರಾಜ ಶೀಲವಂತರ, ಮುದುಕಪ್ಪ ಹೊಸಮನಿ, ಎಸ್.ಎ.ಗಫಾರ್, ಮೂಕಪ್ಪ ಮೇಸ್ತ್ರಿ ಬಸಾಪುರ, ಚನ್ನಬಸಪ್ಪ ಅಪ್ಪಣ್ಣವರ, ಗವಿಸಿದ್ದಪ್ಪ ಹಲಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕರವೇ ಮನವಿ ಸಲ್ಲಿಕೆ: ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪನೆಗೆ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡಬೇಕು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳು ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತೆ ನಡೆಯುತ್ತಿದ್ದರೂ ಗಾಢ ನಿದ್ದೆಯಲ್ಲಿರುವ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಆಗ್ರಹಿಸಿದರು.

ಕೊಪ್ಪಳ ತಾಲ್ಲೂಕಿನ ಶಿವಪುರ, ಬಂಡಿಹರ್ಲಾಪುರ, ಅಗಳಕೇರಾ, ಬಸಾಪುರ, ಹುಸೇನ್‍ಪುರ, ಹಾಲವರ್ತಿ ಹಾಗೂ ಹೂವಿನಾಳ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಸಂಪತ್ತನ್ನು ಹಾಳು ಮಾಡಿ ಅಕ್ರಮ ಕಲ್ಲು ಮತ್ತು ಮುರಮ್ ಗಣಿಗಾರಿಕೆ ನಡೆಸುತ್ತಿರವವರ ಮೇಲೆ ಕ್ರಮ ಕೈಗೊಂಡು ಸ್ಥಗಿತಗೊಳಿಸಬೇಕು ಎಂದು ಸಂಘಟನೆಯ ಪ್ರಮುಖರಾದ ಹನುಮಂತ ಬೆಸ್ತರ, ಶಿವನಗೌಡ ಪಾಟೀಲ ಹಲಗೇರಿ, ವಿರೇಶ ಮುಂಡಾಸದ, ಕುಮಾರಸ್ವಾಮಿ ನಾಗರಳ್ಳಿ, ಗವಿಸಿದ್ದಪ್ಪ ನಿರಾದಿಡ್ಡಿ, ರಮೇಶ ಹೊಸಳ್ಳಿ ಆಗ್ರಹಿಸಿದರು.

ಮನವಿ: ಒಳಮೀಸಲಾತಿ ವರ್ಗೀಕರಣ ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಜಿಲ್ಲಾ ಒಕ್ಕೂಟದ ವತಿಯಿಂದ ಸಿ.ಎಂ.ಗೆ ಮನವಿ ಕೊಡಲಾಯಿತು. 

‘ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಮಾಡಿದ್ದು, ಇದರಲ್ಲಿ ಪರಿಶಿಷ್ಠ ಜಾತಿ ಜನಸಂಖ್ಯೆ ಹಿಂದುಳಿವಿಕೆ ಆಧಾರದ ಮೇಲೆ ನೇರ ನೇಮಕಾತಿ ಸಂದರ್ಭದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಜಾತಿಗಳು ಪ್ರವರ್ಗ ಎ ಪ್ರವರ್ಗ ಬಿ ದಲ್ಲಿ ಸೌಲಭ್ಯ ಪಡೆಯಬಹುದು ಎಂದು ಹೇಳಲಾಗಿದೆ ಇದರಿಂದ ಮಾದಿಗ ಸಮುದಾಯಕ್ಕೆ ಸಂಪೂರ್ಣ ಅನ್ಯಾಯವಾಗುತ್ತದೆ’ ಎಂದು ಸಮಾಜದ ಮುಖಂಡರು ಹೇಳಿದರು.

ಮುಖಂಡರಾದ ಗಣೇಶ ಹೊರತಟ್ನಾಳ್, ಸಿದ್ದಪ್ಪ ಬೇಳೂರು, ನಾಗಲಿಂಗ ಮಾಳೆಕೊಪ್ಪ, ಸಿದ್ದು ಮಣ್ಣಿನವರ, ಮಾರುತಿ ಬಿಕನಹಳ್ಳಿ, ಮಂಜುನಾಥ ಮುಸಲಾಪುರ, ಸ್ವಾಮಿ ಹಾಲವರ್ತಿ, ಫಕೀರಪ್ಪ ದೊಡ್ಡಮನಿ, ಶಿವಪ್ಪ ತಾಳ ಕನಕಾಪುರ ಇದ್ದರು. 

ಕೊಪ್ಪಳದಲ್ಲಿ ಹಸಿರು ಸೇನೆ ಸಂಘಟನೆಯವರು ಪ್ರತಿಭಟನೆ ನಡೆಸಿದರು

‘ನ್ಯಾಯಾಲಯದಲ್ಲಿ ಬಲ್ಡೋಟಾ ವಿಚಾರ’

ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಕುರಿತಂತೆ ಕೊಪ್ಪಳದಲ್ಲಿ ನಡೆದ ಹೋರಾಟಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬಲ್ಡೋಟಾ ಕಾರ್ಖಾನೆಯ ವಿಚಾರ ನ್ಯಾಯಾಲಯದಲ್ಲಿ ವಿಲೇವಾರಿ ಆಗಬೇಕಾಗಿದ್ದು ತೀರ್ಪಿನ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು. ವಿವಿಧ ಕೈಗಾರಿಕೆಗಳಿಂದ ಬರುವ ದೂಳಿನಿಂದ ಪರಿಸರ ಮಾಲಿನ್ಯವಾಗುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರದ ಕ್ರಮ ತೆಗೆದುಕೊಳ್ಳುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ‘ಕಾರ್ಖಾನೆಗಳಿಂದ ಬರುವ ದೂಳನ್ನು ಪರೀಕ್ಷೆ ನಡೆಸಿ ದೂಳು ಬರದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಮನವಿ ನೀಡಲು ಬಂದ ರೈತರ ವಶ ಬಿಡುಗಡೆ

ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದವರು ಮನವಿ ಪತ್ರ ನೀಡಲು ಬಂದಾಗ ಪೊಲೀಸರು ತಡೆದರು.  ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಕುಳಿತ ಸಂಘಟನೆಯವರು ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲು ಅವಕಾಶ ಕೊಡುವಂತೆ ಆಗ್ರಹಿಸಿದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಬಳಿಕ ತಳಕಲ್‌ನ ಪರಿವೀಕ್ಷಣಾ ಮಂದಿರದಲ್ಲಿ ಕೂಡಿ ಇಟ್ಟಿದ್ದರು ಎಂದು ಸಂಘಟನೆಯವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.