ಕುಷ್ಟಗಿ: ಮಳೆಗಾಲದಲ್ಲಿ ಜನರು ಪ್ರವಾಹ ಭೀತಿ, ಇತರೆ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿನ ಬಳೂಟಗಿ ಮತ್ತು ಬನ್ನಟ್ಟಿ ಗ್ರಾಮಗಳಿಗೆ ಗ್ರೇಡ್ 2 ತಹಶೀಲ್ದಾರ್ ಮುರಳೀಧರ ಮುಕ್ತೇದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳೂಟಗಿ ಮತ್ತು ಕೂಡ್ಲೂರು ಗ್ರಾಮಗಳ ನಡುವೆ ಮಳೆ ಬಂದಾಗ ಸಾಕಷ್ಟು ನೀರು ಸಂಗ್ರಹಗೊಂಡು ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಸಾರ್ವಜನಿಕರ ಕಾಲ್ನಡಿಗೆ, ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರ ಸಾಧ್ಯವಾಗುವುದಿಲ್ಲ. ಅದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಅದೇ ರೀತಿ ಪರಿಶಿಷ್ಟರು ವಾಸಿಸುವ ಕಾಲೊನಿ, ಅಂಗನವಾಡಿ ಕೇಂದ್ರದ ಸುತ್ತ ಕೊಳಚೆ ನೀರು ನಿಲ್ಲುತ್ತಿದ್ದು ವಾತಾವರಣ ಮಲಿನವಾಗಿದೆ. ಸೊಳ್ಳೆಗಳ ಸಂತತಿ ಹೆಚ್ಚಿ ವಿವಿಧ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸಿಲ್ಲ ಎಂದು ಅಲ್ಲಿಯ ನಿವಾಸಿಗಳು ಸಮಸ್ಯೆ ವಿವರಿಸಿದರು. ಪರಿಸರ ನೈರ್ಮಲ್ಯಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರು ಅಭಿವೃದ್ಧಿ ಅಧಿಕಾರಿಗೆ ದೂರವಾಣಿ ಮೂಲಕ ತಾಕೀತು ಮಾಡಿದರು.
ಅದೇ ರೀತಿ ಪ್ರವಾಹ ಪೀಡಿತ ಎಂದೇ ಘೋಷಿಸಲಾಗಿರುವ ಬನ್ನಟ್ಟಿ ಗ್ರಾಮಕ್ಕೂ ತಹಶೀಲ್ದಾರ್ ಮುರಳೀಧರ ಭೇಟಿ ನೀಡಿದರು. ಈಗಾಗಲೇ ಈ ಗ್ರಾಮವನ್ನು ಸ್ಥಳಾಂತರ ಮಾಡಿದ್ದು ಉಳಿದವರೂ ಅಲ್ಲಿಗೆ ತೆರಳಬೇಕು, ಪ್ರವಾಹದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಅಲ್ಲಿಯ ಕೆಲ ಕುಟುಂಬಗಳಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.