ಕೊಪ್ಪಳ: ‘ಭಾರತೀಯ ಮೂಲ ಧರ್ಮಗಳ ಪವಿತ್ರ ಕ್ಷೇತ್ರಗಳನ್ನು ಅಪವಿತ್ರಗೊಳಿಸಲು ಧರ್ಮಸ್ಥಳದಲ್ಲಿ ಮಾಡುತ್ತಿರುವಂತೆಯೇ ಕೂಡಲಸಂಗಮದಲ್ಲಿಯೂ ಷಡ್ಯಂತ್ರ ಮಾಡಲಾಗುತ್ತಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿದರು.
ಬುಧವಾರ ಇಲ್ಲಿನ ಗವಿಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ಕಲವು ಕಮ್ಯೂನಿಸ್ಟ್ ಬುದ್ಧಿ ಇರುವವರು, ಖಾವಿ ವೇಷ ಧರಿಸಿರುವ ಕೆಲ ಕಳ್ಳ ಸ್ವಾಮೀಜಿಗಳು ಇಸ್ಲಾಂ ಹಾಗೂ ಲಿಂಗಾಯತ ಎರಡೂ ಒಂದೇ ಎನ್ನುವ ರೀತಿಯಲ್ಲಿದ್ದಾರೆ. ದೇಶದಲ್ಲಿ ಮೊದಲು ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿಕ ಧರ್ಮಸ್ಥಳ ಮತ್ತು ಕೂಡಲಸಂಗಮವನ್ನು ಅಪವಿತ್ರ ಮಾಡಲು ಈಗ ಮುಂದಾಗಿದ್ದಾರೆ’ ಎಂದು ದೂರಿದರು.
‘ಕೂಡಲಸಂಗಮದಲ್ಲಿ ಕೆಲವರು ವೈಯಕ್ತಿಕ ಹಿತಾಸಕ್ತಿಗೆ ಬೀಗ ಹಾಕಿದ್ದಾರೆ. ಈಗ ಬೀಗ ಹಾಕಿದವರ ಮನೆಗೂ ಮುಂದಿನ ದಿನಗಳಲ್ಲಿ ಬೀಗ ಬೀಳಲಿದೆ. ಜನ ಭಕ್ತಿಯಿಂದ ಕೊಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡರೆ ಯಾರೂ ಉದ್ದಾರವಾಗುವುದಿಲ್ಲ. ವೀರಶೈವ ಲಿಂಗಾಯತರು ಒಗ್ಗೂಡಬೇಕು ಎಂದು ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಹೇಳಲಾಗಿದೆ. ಆದರೆ ಅಲ್ಲಿ ಹಾಕಿದ್ದ ನಾಮಫಲಕದ ಮೇಲೆ ವೀರಶೈವ ಲಿಂಗಾಯತರು ಎಂದು ಎಲ್ಲಿಯೂ ಬರೆದಿರಲಿಲ್ಲ. ಯಡಿಯೂರಪ್ಪ, ಶಾಮನೂರು ಶಿವಶಂಕ್ರಪ್ಪ ಮತ್ತು ಈಶ್ವರ ಖಂಡ್ರೆ ತ್ರಿಮೂರ್ತಿಗಳು ಕುಳಿತೇ ಎಲ್ಲವನ್ನೂ ಆದೇಶ ಮಾಡುತ್ತಾರೆ’ ಎಂದು ಲೇವಡಿ ಮಾಡಿದರು.
ಶೀಘ್ರದಲ್ಲಿ ಹೊಸ ಪಕ್ಷ: ‘ವಿಜಯೇಂದ್ರನನ್ನು ಮತ್ತೆ ಅಧ್ಯಕ್ಷ ಮಾಡಿ ಬಿಜೆಪಿಯವರು ತಲೆ ಮೇಲೆ ಕೂಡಿಸಿಕೊಂಡರೆ ಅಂದೇ ಹೊಸ ಪಕ್ಷ ಘೋಷಣೆ ನಿಶ್ಚಿತ. ರಾಜ್ಯದಲ್ಲಿ ಯಾರೂ ವಿಜಯೇಂದ್ರ ನಾಯಕತ್ವ ಒಪ್ಪಿಸಿಕೊಂಡಿಲ್ಲ. ಬೇರೆ ರಾಜ್ಯಗಳಲ್ಲಿ ಹೊಸ ರಾಜ್ಯಾಧ್ಯಕ್ಷರ ನೇಮಕವಾದರೂ ಕರ್ನಾಟಕದಲ್ಲಿ ಆಗುತ್ತಿಲ್ಲ. ಆತನ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ 30 ಕ್ಷೇತ್ರಗಳಲ್ಲಿಯೂ ಗೆಲ್ಲುವುದಿಲ್ಲ. ವಿಜಯೇಂದ್ರ ಬಿಟ್ಟು ಬೇರೆ ಯಾರೇ ಅಧ್ಯಕ್ಷರಾದರೂ ಒಪ್ಪಿಕೊಳ್ಳುವೆ. ನಾನು ಬಿಜೆಪಿಯಲ್ಲಿಯೇ ಇರುವೆ. ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ. ಯಡಿಯೂರಪ್ಪ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ಹೊರಗಡೆ ಹಾಕಿದ್ದಾನೆ ಅಷ್ಟೇ ಎಂದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾಗಿ ಕೆಲ ಸ್ವಾಮೀಜಿಗಳು ಹೇಳುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ’ಕೆಲವು ಸ್ವಾಮೀಜಿಗಳೇ ಭ್ರಷ್ಟರಿದ್ದಾರೆ. ಶಿವಕುಮಾರ್ ದೊಡ್ಡ ಮೊತ್ತ ನೀಡಿ ಪಾದಪೂಜೆ ಮಾಡಿದರೆ ಮುಖ್ಯಮಂತ್ರಿ, ಪ್ರಧಾನಿ ಆಗುತ್ತಾರೆ ಎಂದು ಸ್ವಾಮೀಜಿಗಳು ಸುಳ್ಳು ಆಶೀರ್ವಾದ ಮಾಡುತ್ತಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.