ಕೊಪ್ಪಳ: ’ಯಾವುದೇ ಜಾತಿಯವರಾಗಿದ್ದರೂ ಧರ್ಮದ ವಿಷಯ ಬಂದಾಗ ಎಲ್ಲ ಹಿಂದೂಗಳು ಒಂದಾಗಬೇಕು. ಈಗ ಗವಿಸಿದ್ದಪ್ಪ ನಾಯಕ ಅವರಿಗೆ ಆದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಉಳಿದವರಿಗೂ ಬರಬಹುದು. ಈ ಅನ್ಯಾಯದ ವಿರುದ್ಧದ ಹೋರಾಟಕ್ಕೂ ಸಮಸ್ತ ಹಿಂದೂಗಳು ಒಂದುಗೂಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಆ. 3ರಂದು ಕೊಲೆಗೀಡಾದ ಇಲ್ಲಿನ ಕುರುಬರ ಓಣಿಯ ಗವಿಸಿದ್ದಪ್ಪ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ಈಗಿನ ಮುಸ್ಲಿಮರ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ. ಮಸೀದಿ ಮುಂದೆಯೇ ಕೊಲೆ ನಡೆದರೂ ನಮಾಜ್‌ಗೆ ಹೋದವರು ತಡೆಯುವ ಪ್ರಯತ್ನ ಮಾಡಿಲ್ಲವೆನ್ನುವುದನ್ನೂ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೊಲೆ ಆರೋಪಿ ಕೃತ್ಯ ಎಸಗುವ ಮೊದಲು ರೀಲ್ಸ್ ಮಾಡಿದಾಗಲೂ ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ. ಪ್ರೀತಿಸಿದ ಮುಸ್ಲಿಂ ಯುವತಿಯನ್ನೂ ಬಂಧಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾಟಾಚಾರಕ್ಕೆ ಎನ್ನುವಂತೆ ಬಂದು ಸಂತೈಸಿ ಹೋಗಿದ್ದಾರೆ’ ಎಂದು ಟೀಕಿಸಿದರು.
ವಿವಿಧ ನಾಯಕರ ಭೇಟಿ: ಗವಿಸಿದ್ದಪ್ಪ ನಾಯಕ ಅವರ ಮನೆಗೆ ಭಾನುವಾರ ಅನೇಕ ನಾಯಕರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹಾಗೂ ಸದಸ್ಯರು ಕುಟುಂಬ ಸದಸ್ಯರ ಜೊತೆ ಮಾತನಾಡಿ ‘ನಿಮಗೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು. ನಿಮ್ಮ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗುತ್ತೇವೆ. ಕೊಲೆಗೆ ನ್ಯಾಯ ದೊರಕಿಸಿಕೊಡಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.
ಪ್ರಾಧಿಕಾರದ ಸದಸ್ಯರಾದ ಮಾರ್ಕಂಡಪ್ಪ ಕಲ್ಲನ್ನವರ, ಅಜ್ಜಪ್ಪಸ್ವಾಮಿ ಚನ್ನವಡೆಯರಮಠ, ಖತೀಬ್ ಬಾಷುಸಾಬ, ಕಾಂಗ್ರೆಸ್ ಮುಖಂಡ ಶರಣಪ್ಪ ಚಂದನಕಟ್ಟಿ, ನಗರಸಭೆ ಸದಸ್ಯರಾದ ಅರುಣ ಅಪ್ಪುಶೆಟ್ಟಿ, ಚನ್ನಪ್ಪ ಕೊಟ್ಯಾಳ, ಓಂ ಪ್ರಕಾಶ, ನಾಗರಾಜ ಕಂದಾರಿ, ರತನ್ ಪುರೋಹಿತ್, ಬಾಬುಲಾಲ್ ಪುರೋಹಿತ್ ಸೇರಿದಂತೆ ಇದ್ದರು. ಕ್ರೈಸ್ತ ಸಮುದಾಯದ ವಿವಿಧ ಮುಖಂಡರು, ಹಡಪದ ಸಮಾಜ, ಕುರುಬ ಸಮುದಾಯದ ಮುಖಂಡರು ಭೇಟಿ ನೀಡಿದರು.
ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಲು ಸೋಮವಾರ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ನೀಡುವಂತೆ ವರ್ತಕರಿಗೆ ಮನವಿ ಮಾಡಿದ್ದೇನೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆನಿಂಗಜ್ಜ ಕೊಲೆಯಾದ ಯುವಕನ ತಂದೆ
₹50 ಲಕ್ಷ ಪರಿಹಾರ ಕೊಡಿ: ಈಶ್ವರಪ್ಪ
ಕೊಪ್ಪಳ: ಕೊಲೆಯಾದ ಯುವಕನ ಕುಟುಂಬದವರ ಆಸರೆಗೆ ಸರ್ಕಾರ ₹50 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು. ಯುವಕನ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿ ‘ನೊಂದ ಕುಟುಂಬಕ್ಕೆ ಸರ್ಕಾರ ಕೊಡುವುದು ಭಿಕ್ಷೆಯಲ್ಲ. ಹೃದಯಾಘಾತದಿಂದ ಮೃತಪಟ್ಟ ಪ್ರಕರಣದಲ್ಲೂ ಸರ್ಕಾರ ₹25 ಲಕ್ಷ ಪರಿಹಾರ ನೀಡಿದ ಉದಾಹರಣೆಯಿದೆ. ಇಂಥ ಪ್ರಕರಣದಲ್ಲಿ ₹50 ಲಕ್ಷ ನೀಡಬೇಕು ಕುಟುಂಬದವರು ಹೇಳುವ ವ್ಯಕ್ತಿಗೆ ಸರ್ಕಾರಿ ನೌಕರಿ ಕೊಡಬೇಕು’ ಎಂದರು. ‘ಹಿಂದೂ ಸಮಾಜ ಜಾಗೃತವಾಗುವ ಮೊದಲೇ ಸರ್ಕಾರ ಯುವತಿ ಮತ್ತು ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ವಹಿಸಬೇಕು. ಕೊಪ್ಪಳದಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.