ADVERTISEMENT

ಬೆಳೆಗಳಿಗೆ ಬೆಂಬಲ ಬೆಲೆ ನೀಡಿ: ಅಮರೇಗೌಡ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:45 IST
Last Updated 24 ನವೆಂಬರ್ 2020, 16:45 IST
ಗಂಗಾವತಿ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಯಿತು
ಗಂಗಾವತಿ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಯಿತು   

ಕುಷ್ಟಗಿ: ತೆರೆದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಹಾಗೂ ಸಜ್ಜೆ ಧಾರಣೆ ಕುಸಿಯುತ್ತಿದೆ. ಆದರೂ ಅದನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಮುಂದಾಗದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಸಂಕಷ್ಟದಿಂದ ಪಾರುಮಾಡುವಲ್ಲಿ ವಿಫಲವಾಗಿವೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,‘ಪ್ರತಿ ಕ್ವಿಂಟಲ್‌ಗೆ ಮೆಕ್ಕೆಜೋಳವನ್ನು ₹2,100 ಮತ್ತು ಸಜ್ಜೆಯನ್ನು ₹1,850 ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ರಾಜ್ಯ ಸರ್ಕಾರ ಪ್ರಚಾರ ಮಾಡಿತ್ತು. ಆದರೆ ವಾಸ್ತವದಲ್ಲಿ ಈ ಎರಡೂ ಕೃಷಿ ಹುಟ್ಟುವಳಿಗಳ ದರ ಸದ್ಯ ಇಳಿಮುಖವಾಗಿದೆ. ಬೆಳೆ ಬೆಳೆಯುವುದಕ್ಕೆ ಮಾಡಿದ ಖರ್ಚು ಕೂಡ ರೈತರಿಗೆ ಮರಳಿ ಬಾರದಂತಾಗಿದೆ.

ಪರಿಸ್ಥಿತಿ ಹೀಗಿದ್ದರೂ ಸರ್ಕಾರಗಳು ರೈತರ ಸಮಸ್ಯೆಯನ್ನು ಅರ್ಥಮಾಡಿಕೊಂಡಿಲ್ಲ ಎಂದು ದೂರಿದರು.

ADVERTISEMENT

ಈ ಭಾಗದಲ್ಲಿ ಖರೀದಿಸುವ ಮೆಕ್ಕೆಜೋಳ, ಸಜ್ಜೆ ಮತ್ತು ಭತ್ತಕ್ಕೂ ಪ್ರತಿ ಕ್ವಿಂಟಾಲ್‌ಗೆ ₹500 ರಂತೆ ಹೆಚ್ಚುವರಿ ಹಣ ನೀಡಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈಚೆಗೆ ಮಸ್ಕಿಯಲ್ಲಿ ನಡೆದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಬೆಂಬಲ ಬೆಲೆ ಖರೀದಿ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಈ ವಿಷಯದಲ್ಲಿ ಪಕ್ಷ ರೈತರ ಪರವಾಗಿ ನಿಲ್ಲಲಿದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡುವುದಾಗಿಯೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.